ಇತ್ತೀಚೆಗಷ್ಟೇ ರಾಮಾಯಣವನ್ನು ಆಧರಿಸಿದ ಚಿತ್ರದ ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ 12ಕೋಟಿ ಸಂಭಾವನೆಯನ್ನು ಕೇಳಿದ್ದರು ಎಂದು ಸುದ್ದಿ ಹರಿದಾಡಿತ್ತು. ಈ ವಿಷಯದ ಕುರಿತಂತೆ ಕರೀನಾ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರದ ಕುರಿತಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಸಂದರ್ಶನದಲ್ಲಿ, ‘‘ಕರೀನಾ ನಿಮ್ಮ ಮುಂದಿನ ಚಿತ್ರ ಯಾವುದು? ಅಮೀರ್ ಖಾನ್ ಜೊತೆಗೆ ಒಂದು ಚಿತ್ರದಲ್ಲಿ ಕಾಣಿಕೊಳ್ಳಲಿದ್ದೀರಿ. ಆದರೆ, ನೀವು ಒಂದು ಚಿತ್ರಕ್ಕೆ 12ಕೋಟಿ ಬೇಡಿಕೆ ಇಟ್ಟಿದ್ದೀರಿ ಎಂಬ ಸುದ್ದಿಯೊಂದು ಹರಿದಾಡಿದೆ. ಖ್ಯಾತ ನಟಿಯರು ನಿಮಗೆ ಬೆಂಬಲವನ್ನೂ ಸೂಚಿಸಿದ್ದಾರೆ. ಆದರೆ ನನ್ನ ಪ್ರಕಾರ ಅದು ಸುಳ್ಳು ಸುದ್ದಿ…’’ ಎಂದು ಸಂದರ್ಶಕ ಮಾತನಾಡಿದ್ದಾರೆ. ಈ ವೇಳೆ ಕರೀನಾ ಕಪೂರ್ ಪ್ರಶ್ನೆಗೆ ತಲೆದೂಗಿ, ‘‘ಹೌದು ಹೌದು’’(“Yeah, yeah…”) ಎಂದಿದ್ದಾರೆ.
ಈ ಮೂಲಕ ಕರೀನಾ ಮೊದಲ ಬಾರಿಗೆ 12ಕೋಟಿ ಸಂಭಾವನೆಯ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಿದಂತಾಗಿದೆ. ರಾಮಾಯಣವನ್ನು ಸೀತೆಯ ದೃಷ್ಟಿಕೋನದಿಂದ ಕಟ್ಟಿಕೊಡಲು ಆ ಚಿತ್ರದಲ್ಲಿ ಪ್ರಯತ್ನಿಸಲಾಗುತ್ತದೆ ಎನ್ನಲಾಗಿತ್ತು. ಆ ಚಿತ್ರಕ್ಕೆ ಸುಮಾರು 8ರಿಂದ 9ತಿಂಗಳು ಪ್ರತ್ಯೇಕ ಸಮಯವನ್ನು ನೀಡಬೇಕಾಗುತ್ತದೆ. ಹಾಗಿರುವಾಗ ಅಷ್ಟು ಸಂಭಾವನೆಗೆ ಬೇಡಿಕೆ ಇಡುವುದು ತಪ್ಪಲ್ಲ ಎಂಬ ಅಭಿಪ್ರಾಯ ಆಗ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಸೀತೆಯ ಪಾತ್ರಕ್ಕೆ ಕರೀನಾ ಸಂಭಾವನೆಯನ್ನು ಏರಿಸಿದ್ದರ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ಒಂದು ವರ್ಗ, ಸೀತೆಯ ಪಾತ್ರಕ್ಕೆ ಹೆಚ್ಚು ಸಂಭಾವನೆ ಕೇಳುವ ಮುಖಾಂತರ ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿತ್ತು. ಆದರೆ, ಚಿತ್ರರಂಗ ಕರೀನಾ ಬೆಂಬಲಕ್ಕೆ ನಿಂತಿತ್ತು. ಪೂಜಾ ಹೆಗ್ಡೆ, ತಾಪ್ಸಿ ಪನ್ನು, ಪ್ರಿಯಾಮಣಿ ಮೊದಲಾದವರು ಈ ಕುರಿತು ಮುಕ್ತವಾಗಿ ಮಾತನಾಡಿದ್ದರು.
ಈ ಬಗ್ಗೆ ಪೂಜಾ ಹೆಗ್ಡೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಕೆಲವಷ್ಟು ಜನರು ಹೇಳುತ್ತಾರೆ, ಏಕೆಂದರೆ ಹೇಳೋದೆ ಅವರ ಕೆಲಸ. ಕರೀನಾ ತಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಕೇಳಿದ್ದಾರೆ. ಯಾವ ಮಹಿಳೆಯರು ತಮ್ಮ ಮೌಲ್ಯವನ್ನು ಕಂಡುಕೊಳ್ಳುತ್ತಾರೋ ಅವರಿಗೆ ತಕ್ಕನಾದ ಗೌರವ ಸಿಕ್ಕೇ ಸಿಗುತ್ತದೆ’ ಎಂದು ಕರೀನಾರನ್ನು ಬೆಂಬಲಿಸಿದ್ದರು.
ರಾಮಾಯಣದ ಕಥೆಯನ್ನು ಈಗಾಗಲೇ ಜನರು ಹಲವು ರೂಪಗಳಲ್ಲಿ ತಿಳಿದುಕೊಂಡಿದ್ದಾರೆ. ಸೀರಿಯಲ್, ಸಿನಿಮಾ, ವೆಬ್ ಸಿರೀಸ್ನಲ್ಲೂ ರಾಮಾಯಣ ಮೂಡಿಬಂದಿದೆ. ಹಾಗಿದ್ದರೂ ಮತ್ತೊಮ್ಮೆ ಮೆಗಾ ಬಜೆಟ್ನಲ್ಲಿ ರಾಮಾಯಣ ಕಥೆಯನ್ನು ತೆರೆ ಮೇಲೆ ತರಲು ಬಾಲಿವುಡ್ನಲ್ಲಿ ಮಾತುಕತೆ ನಡೆಯುತ್ತಿದೆ. ಆ ಚಿತ್ರದ ಸೀತೆ ಪಾತ್ರಕ್ಕೆ ಕರೀನಾಗೆ ಆಫರ್ ನೀಡಲಾಗಿತ್ತು. ಆದರೆ ಅವರು 12 ಕೋಟಿ ರೂ. ಸಂಭಾವನೆ ಕೇಳಿದ್ದರಿಂದ, ಅಷ್ಟು ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಯಿತು ಎಂಬ ಗಾಸಿಪ್ ಹರಿದಾಡಿತ್ತು.
ಕರೀನಾ ಎರಡನೇ ಮಗುವಿನ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಗುವಿಗೆ ಜನ್ಮ ನೀಡುವುದಕ್ಕೂ ಮುನ್ನ ಅವರು ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಲಾಕ್ಡೌನ್ ಕಾರಣಕ್ಕಾಗಿ ಚಿತ್ರದ ಕೆಲಸಗಳು ತಡವಾಗಿವೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಆಗಿ ‘ಲಾಲ್ ಸಿಂಗ್ ಚಡ್ಡಾ’ ಮೂಡಿಬರುತ್ತಿದೆ.
ಇದನ್ನೂ ಓದಿ:
Kamal Haasan: ಕಮಲ್ ಹಾಸನ್, ಚಾರುಹಾಸನ್, ಮಣಿರತ್ನಂ, ಸುಹಾಸಿನಿ ಎಲ್ಲರೂ ಒಂದೇ ಚಿತ್ರದಲ್ಲಿ; ಏನು ವಿಶೇಷ?
Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?
(Kareena Kapoor opens up about gossip of her 12Cr Payment for Sita Role)