ಆಮಿರ್ ಖಾನ್​ ಜತೆ ಸುಪ್ರೀಂ ಕೋರ್ಟ್​ಗೆ ಹೋದ ಮಾಜಿ ಪತ್ನಿ ಕಿರಣ್​ ರಾವ್​ಗೆ ಬಂತು ಹೊಸ ಆಸೆ

ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರಿಗೆ ಸುಪ್ರೀಂ ಕೋರ್ಟ್​ಗೆ ತೆರಳುವ ಅವಕಾಶ ಸಿಕ್ಕಿದೆ. ಅಲ್ಲಿಗೆ ಹೋಗಿ ಬಂದ ಬಳಿಕ ಕಿರಣ್​ ರಾವ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವರ್ಷ ತೆರೆಕಂಡು ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದ ‘ಲಾಪತಾ ಲೇಡಿಸ್​’ ಸಿನಿಮಾಗೆ ಕಿರಣ್​ ರಾವ್​ ನಿರ್ದೇಶನ ಮಾಡಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.

ಆಮಿರ್ ಖಾನ್​ ಜತೆ ಸುಪ್ರೀಂ ಕೋರ್ಟ್​ಗೆ ಹೋದ ಮಾಜಿ ಪತ್ನಿ ಕಿರಣ್​ ರಾವ್​ಗೆ ಬಂತು ಹೊಸ ಆಸೆ
ಆಮಿರ್​ ಖಾನ್​, ಕಿರಣ್​ ರಾವ್​
Follow us
ಮದನ್​ ಕುಮಾರ್​
|

Updated on: Aug 09, 2024 | 8:44 PM

2021ರಲ್ಲಿ ವಿಚ್ಛೇದನ ಪಡೆದ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ನಡುವೆ ಈಗಲೂ ಆತ್ಮೀಯತೆ ಇದೆ. ಇಂದು (ಆಗಸ್ಟ್​ 9) ಅವರು ಸುಪ್ರೀಂ ಕೋರ್ಟ್​ಗೆ ತೆರಳಿದ್ದಾರೆ. ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದ ಮಾತ್ರಕ್ಕೆ ಏನೋ ಕಿರಿಕ್​ ಇರಬಹುದು ಎಂದುಕೊಳ್ಳುವಂತಿಲ್ಲ. ಇಂದು ಅವರಿಬ್ಬರು ಕೋರ್ಟ್​ಗೆ ಹೋಗಿರುವುದು ಒಂದು ಒಳ್ಳೆಯ ಕಾರಣದಿಂದ. ಹೌದು, ಆಮಿರ್​ ಖಾನ್​ ನಿರ್ಮಿಸಿ, ಕಿರಣ್​ ರಾವ್​ ನಿರ್ದೇಶನ ಮಾಡಿದ್ದ ‘ಲಾಪತಾ ಲೇಡೀಸ್’ ಸಿನಿಮಾ ಸುಪ್ರೀಂ ಕೋರ್ಟ್​ನಲ್ಲಿ ಪ್ರದರ್ಶನ ಕಂಡಿದೆ. ಆ ಬಳಿಕ ಕಿರಣ್​ ರಾವ್​ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್​ನ 75ನೇ ವಾರ್ಷಿಕೋತ್ಸವದ ಸಲುವಾಗಿ ‘ಲಾಪತಾ ಲೇಡೀಸ್​’ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಲು ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರನ್ನು ಆಹ್ವಾನಿಸಲಾಗಿತ್ತು. ಈ ವಿಶೇಷ ಅವಕಾಶವನ್ನು ಮಾಜಿ ದಂಪತಿ ಸದುಪಯೋಗ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಮಾಧ್ಯಮಗಳ ಜೊತೆ ಕಿರಣ್​ ರಾವ್​ ಮಾತನಾಡಿದ್ದಾರೆ. ಅವರಿಗೆ ಈಗ ಕೋರ್ಟ್​ ಕುರಿತು ಕಥೆ ಇರುವ ಸಿನಿಮಾವನ್ನು ಮಾಡುವ ಆಸೆ ಬಂದಿದೆ.

‘ಸುಪ್ರೀಂ ಕೋರ್ಟ್​ ಜಡ್ಜ್​​ಗಳು, ಅವರ ಕುಟುಂಬದವರು ಹಾಗೂ ಅಧಿಕಾರಿಗಳಿಗಾಗಿ ನಮ್ಮ ಸಿನಿಮಾ ಪ್ರದರ್ಶನಗೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಇಲ್ಲಿಗೆ ಬಂದಿದ್ದಕ್ಕೆ ಬಹಳ ಖುಷಿ ಆಗಿದೆ’ ಎಂದು ಅವರು ಹೇಳಿದ್ದಾರೆ. ಈ ಅನುಭವದಿಂದ ಮುಂದೇನಾದರೂ ಕೋರ್ಟ್​ ರೂಂ ಡ್ರಾಮಾ ಸಿನಿಮಾವನ್ನು ಮಾಡುವ ಆಸೆ ಇದೆಯಾ ಎಂದು ಕೇಳಿದ್ದಕ್ಕೆ, ‘ಮಾಡಲು ಇಷ್ಟ ಇದೆ. ಇದನ್ನೆಲ್ಲ ಒಂದು ದಿನ ಪೂರ್ತಿ ನೀಡಿದ್ದರೆ ಚೆನ್ನಾಗಿತ್ತು. ಮುಂದೊಂದು ದಿನ ಆ ರೀತಿ ಸಿನಿಮಾ ಮಾಡಬಹುದು’ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರಿಂದ ಭೇಷ್​ ಎನಿಸಿಕೊಂಡ ‘ಲಾಪತಾ ಲೇಡೀಸ್​’ ನಿರ್ದೇಶಕಿ ಕಿರಣ್​ ರಾವ್​

ವಿಶೇಷ ಕಥಾಹಂದರ ಸಿನಿಮಾಗಳನ್ನು ಮಾಡುವಲ್ಲಿ ಕಿರಣ್​ ರಾವ್​ ಅವರು ಫೇಮಸ್​ ಆಗಿದ್ದಾರೆ. ‘ಲಾಪತಾ ಲೇಡೀಸ್​’ ಸಿನಿಮಾದಲ್ಲಿ ಗಂಡು-ಹೆಣ್ಣಿನ ನಡುವಿನ ಲಿಂಗ ಸಮಾನತೆ ಬಗ್ಗೆ ಸಂದೇಶ ನೀಡಲಾಗಿದೆ. ಆ ಕಾರಣದಿಂದಲೇ ಈ ಚಿತ್ರವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಇದರಿಂದ ಇಡೀ ತಂಡಕ್ಕೆ ಖುಷಿ ಆಗಿದೆ. ಪ್ರತಿಭಾ ರಂಟಾ, ನಿತಾಂಷಿ ಘೋಯಲ್​, ಸ್ಪರ್ಶ್​ ಶ್ರೀವಾಸ್ತವ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.