ನಟ ಆಮಿರ್ ಖಾನ್ (Aamir Khan) ಅವರು ಏನೇ ಮಾಡಿದರೂ ಒಂದು ವರ್ಗದ ನೆಟ್ಟಿಗರು ತಕರಾರು ತೆಗೆಯುತ್ತಾರೆ. ಅವರ ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂದು ಅನೇಕರು ಒತ್ತಾಯ ಮಾಡುತ್ತಾರೆ. ಅದರ ಬಿಸಿ ಈಗಾಗಲೇ ಆಮಿರ್ ಖಾನ್ ಸಿನಿಮಾಗಳ ಮೇಲೆ ತಟ್ಟಿದೆ. 2018ರಲ್ಲಿ ತೆರೆಕಂಡ ‘ಥಗ್ಸ್ ಆಫ್ ಹಿಂದುಸ್ತಾನ್’ ಸಿನಿಮಾ ಸೋಲುಂಡಿತು. ಈಗ ಅವರ ‘ಲಾಲ್ ಸಿಂಗ್ ಚಡ್ಡಾ’(Laal Singh Chaddha) ಚಿತ್ರಕ್ಕೂ ಬಹಿಷ್ಕಾರದ ಭಯ ಕಾಡುತ್ತಿದೆ. ಈ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಜನರ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ದಯವಿಟ್ಟು ನನ್ನ ಸಿನಿಮಾ ನೋಡಿ. ಪ್ಲೀಸ್.. ಬಹಿಷ್ಕಾರ (Boycott) ಮಾಡಬೇಡಿ’ ಎಂದು ಅವರು ಹೇಳಿದ್ದಾರೆ. ಸಿನಿಮಾ ಪ್ರಚಾರದ ಸಲುವಾಗಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ಈ ಮಾತು ಹಂಚಿಕೊಂಡಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗುತ್ತಿದೆ. ವಿಶೇಷ ಗೆಟಪ್ನಲ್ಲಿ ಆಮಿರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. Boycott Lal Singh Chaddha ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಾರಣ ಆಗಿರುವುದು ಆಮಿರ್ ಖಾನ್ ಅವರ ‘ಅಸಹಿಷ್ಣುತೆ’ ಹೇಳಿಕೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಈ ಹಿಂದೆ ಅವರು ಹೇಳಿದ್ದನ್ನು ಜನರು ಈಗಲೂ ಮರೆತಿಲ್ಲ. ಹಾಗಾಗಿ ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಆಮಿರ್ ಖಾನ್ ಪ್ರತಿಕ್ರಿಯಿಸಿದ್ದಾರೆ.
‘ಅನಗತ್ಯವಾಗಿ ನನ್ನ ಬಗ್ಗೆ ದ್ವೇಷ ಹಬ್ಬಿಸುತ್ತಿರುವುದರಿಂದ ನನಗೆ ಬೇಸರ ಆಗುತ್ತದೆ. ನಾನು ಭಾರತವನ್ನು ಇಷ್ಟಪಡುವ ವ್ಯಕ್ತಿ ಅಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಅದು ನಿಜವಲ್ಲ. ಜನರು ಹಾಗೆ ಅಂದುಕೊಂಡಿರುವುದು ದುರದೃಷ್ಟಕರ. ದಯವಿಟ್ಟು ನನ್ನ ಸಿನಿಮಾಗಳನ್ನು ನೋಡಿ. ಬಹಿಷ್ಕಾರ ಮಾಡಬೇಡಿ’ ಎಂದು ಆಮಿರ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಆಗಿ ‘ಲಾಲ್ ಸಿಂಗ್ ಚಡ್ಡಾ’ ಮೂಡಿಬಂದಿದೆ. ಈ ಚಿತ್ರದಲ್ಲಿ ಆಮಿರ್ ಖಾನ್ ಹಲವು ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಜೋಡಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. ಒಂದು ಅತಿಥಿ ಪಾತ್ರದಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಅಭಿನಯಿಸಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ.
Published On - 7:34 am, Tue, 2 August 22