Salman Khan: ಗನ್ ಇಟ್ಟುಕೊಳ್ಳಲು ಸಲ್ಮಾನ್ ಖಾನ್ಗೆ ಸಿಕ್ತು ಲೈಸೆನ್ಸ್; ಕೊಲೆ ಬೆದರಿಕೆ ಬೆನ್ನಲ್ಲೇ ವಿಶೇಷ ಅನುಮತಿ
Salman Khan Gun License: ಕೊಲೆ ಬೆದರಿಕೆ ಬಂದ ಬಳಿಕ ಸಲ್ಮಾನ್ ಖಾನ್ ಅವರು ಭದ್ರತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಬುಲೆಟ್ ಪ್ರೂಫ್ ಕಾರಿನ ಜತೆ ಅವರೀಗ ಗನ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಆತ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಲೈಸೆನ್ಸ್ ಪಡೆದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರಿಗೆ ಮತ್ತು ಅವರ ತಂದೆ ಸಲೀಮ್ ಖಾನ್ಗೆ ಕೊಲೆ ಬೆದರಿಕೆ (Death Threat) ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಪ್ರಕರಣವನ್ನು ಪರಿಶೀಲಿಸಿದ ನಂತರ ಅವರಿಗೆ ವಿಶೇಷ ಪರವಾನಗಿ ನೀಡಲಾಗಿದೆ. ಇನ್ಮುಂದೆ ಸಲ್ಮಾನ್ ಖಾನ್ ಗನ್ ಇಟ್ಟುಕೊಳ್ಳಲಿದ್ದಾರೆ. ಕಳೆದ ತಿಂಗಳು ಮುಂಬೈ ಪೊಲೀಸ್ ಕಮಿಷನರ್ ಭೇಟಿ ಮಾಡಿದ್ದ ಸಲ್ಮಾನ್ ಖಾನ್ ಅವರು ದೂರು ನೀಡಿದ್ದರು. ಗನ್ ಲೈಸೆನ್ಸ್ (Gun License) ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ನಂತರ ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿದ ಅಧಿಕಾರಿಗಳು ಪರವಾನಗಿ ನೀಡಿದ್ದಾರೆ.
‘ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ರೀತಿ ನಿಮ್ಮನ್ನೂ ಮುಗಿಸುತ್ತೇವೆ’ ಎಂದು ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಆ ಘಟನೆ ಬಳಿಕ ತಮ್ಮ ಭದ್ರತೆ ಬಗ್ಗೆ ಸಲ್ಲು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಶುರುಮಾಡಿದ್ದಾರೆ. ಅದರ ಜೊತೆಗೆ ಅವರು ಗನ್ ಇಟ್ಟುಕೊಳ್ಳಲು ಲೈಸೆನ್ಸ್ ಕೂಡ ಪಡೆದಿದ್ದಾರೆ. ಲೈಸೆನ್ಸ್ ಸಿಕ್ಕಿರುವ ವಿಷಯವನ್ನು ಮುಂಬೈ ಪೊಲೀಸರು ಖಚಿತ ಪಡಿಸಿದ್ದಾರೆ.
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಇದೆ. ಈ ಮೊದಲು 2018ರಲ್ಲಿ ಕೂಡ ಇದೇ ರೀತಿ ಬೆದರಿಕೆ ಹಾಕಲಾಗಿತ್ತು. ಸಿಧು ಮೂಸೆ ವಾಲಾ ನಿಧನದ ಬಳಿಕ ಸೆಲೆಬ್ರಿಟಿಗಳಿಗೆ ಕೊಲೆ ಬೆದರಿಕೆ ಹಾಕುವುದು ಹೆಚ್ಚಾಗಿದೆ. ನಟಿ ಸ್ವರಾ ಭಾಸ್ಕರ್ ಅವರಿಗೂ ಪತ್ರ ಮೂಲಕ ಬೆದರಿಕೆ ಒಡ್ಡಲಾಗಿರುವ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು.
ಹಲವು ಸಿನಿಮಾ ಕೆಲಸಗಳಲ್ಲಿ ಸಲ್ಮಾನ್ ಖಾನ್ ಬ್ಯುಸಿ ಆಗಿದ್ದಾರೆ. ‘ಕಭಿ ಈದ್ ಕಭಿ ದಿವಾಲಿ’, ‘ಟೈಗರ್ 3’ ಮುಂತಾದ ಚಿತ್ರಕ್ಕೆ ಅವರು ಹೀರೋ. ‘ಗಾಡ್ ಫಾದರ್’, ‘ಪಠಾಣ್’ ಮುಂತಾದ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅನೇಕ ಖಾಸಗಿ ಕಂಪನಿಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಈ ಎಲ್ಲ ಕೆಲಸಗಳ ಸಲುವಾಗಿ ಸದಾ ಕಾಲ ಸುತ್ತಾಡುವ ಅವರಿಗೆ ಭದ್ರತೆಯೇ ಬಹಳ ಮುಖ್ಯವಾಗಿದೆ.
Published On - 11:24 am, Mon, 1 August 22