ಮೇಕಪ್ ಮಾಂತ್ರಿಕ ವಿಕ್ರಮ್ ಗಾಯಕ್​ವಾಡ್ ನಿಧನ; ಕಂಬನಿ ಮಿಡಿದ ಭಾರತೀಯ ಚಿತ್ರರಂಗ

ಮೇಕಪ್ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕಲಾವಿದ ವಿಕ್ರಮ್ ಗಾಯಕ್​ವಾಡ್​ ಅವರು ನಿಧನರಾಗಿದ್ದಾರೆ. ವಿಕ್ರಮ್ ಅವರ ಮೇಕಪ್​ ಸಹಾಯದಿಂದ ಹಲವಾರು ಸಿನಿಮಾಗಳು ಜನಮನ ಗೆಲ್ಲಲು ಸಾಧ್ಯವಾಗಿತ್ತು. ಅವರ ನಿಧನಕ್ಕೆ ಆಮಿರ್ ಖಾನ್, ವಿವೇಕ್ ಅಗ್ನಿಹೋತ್ರಿ, ವರುಣ್ ಧವನ್ ಮುಂತಾದವರು ಕಂಬನಿ ಮಿಡಿದಿದ್ದಾರೆ.

ಮೇಕಪ್ ಮಾಂತ್ರಿಕ ವಿಕ್ರಮ್ ಗಾಯಕ್​ವಾಡ್ ನಿಧನ; ಕಂಬನಿ ಮಿಡಿದ ಭಾರತೀಯ ಚಿತ್ರರಂಗ
Vikram Gaikwad

Updated on: May 11, 2025 | 11:15 AM

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್​ವಾಡ್ (Vikram Gaikwad) ಅವರು ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ವಿಕ್ರಮ್ ಗಾಯಕ್​ವಾಡ್ ನಿಧನಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸಂಜು, ಪಿಕೆ, ದಂಗಲ್, ರಂಗ್​ ದೆ ಬಸಂತಿ ಮುಂತಾದ ಸೂಪರ್ ಹಿಟ್ ಬಾಲಿವುಡ್​ (Bollywood) ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ವಿಕ್ರಮ್ ಗಾಯಕ್​​ವಾಡ್ ನಿಧನಕ್ಕೆ (Vikram Gaikwad Death) ಆಮಿರ್ ಖಾನ್, ರಣವೀರ್ ಸಿಂಗ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ವಿಕ್ರಮ್ ಗಾಯಕ್​ವಾಡ್ ನಿಧನದ ಸುದ್ದಿಯನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಲವು ವರ್ಷಗಳಿಂದ ವಿಕ್ರಮ್ ಗಾಯಕ್​ವಾಡ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಬಹುಬೇಡಿಕೆಯ ಮೇಕಪ್ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು.

ಇದನ್ನೂ ಓದಿ
ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ವಿವರಿಸಿದ ರವಿ ಶ್ರೀವತ್ಸ
ಸೌರವ್ ಗಂಗೂಲಿ ಜೀವನ ಆಧರಿಸಿದ ಸಿನಿಮಾಕ್ಕೆ ಕೊನೆಗೂ ಸಿಕ್ಕ ನಾಯಕ
ಬಹುನಿರೀಕ್ಷಿತ ಕ್ರಿಕೆಟಿಗನ ಬಯೋಪಿಕ್ ಘೋಷಣೆ, ಯಾರು ಆ ಆಟಗಾರ
ಬರಲಿದೆ ರಜನಿಕಾಂತ್ ಬಯೋಪಿಕ್; ಬಾಲಿವುಡ್ ನಿರ್ಮಾಪಕನ ಬಂಡವಾಳ

ಅತ್ಯುತ್ತಮ ಮೇಕಪ್​​ಗಾಗಿ ಅವರು ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಕಲಾವಿದರು ನಿರ್ದಿಷ್ಟ ಪಾತ್ರದ ರೀತಿ ಕಾಣಬೇಕು ಎಂದರೆ ಮೇಕಪ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಬಯೋಪಿಕ್ ರೀತಿಯ ಸಿನಿಮಾಗಳಲ್ಲಿ ಮೇಕಪ್ ನಿಜಕ್ಕೂ ಸವಾಲಿನ ಕೆಲಸ ಆಗಿರುತ್ತದೆ. ಅಂಥ ಸವಾಲನ್ನು ‘ದಂಗಲ್’, ‘ಸಂಜು’ ಮುಂತಾದ ಸಿನಿಮಾಗಳಲ್ಲಿ ಸಮರ್ಥವಾಗಿ ನಿಭಾಯಿಸಿದ್ದರು ವಿಕ್ರಮ್ ಗಾಯಕ್​ವಾಡ್. ಅವರ ಕೆಲಸಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದರು.

ಬ್ಲ್ಯಾಕ್ ಮೇಲ್, ಸೂಪರ್ 30, ಬೆಲ್ ಬಾಟಂ, ಥಗ್ಸ್ ಆಫ್ ಹಿಂದುಸ್ತಾನ್, 3 ಈಡಿಯಟ್ಸ್, ದಿಲ್ಲಿ 6, ಭಾಗ್ ಮಿಲ್ಕಾ ಭಾಗ್, ಓಂಕಾರ, ಕಮೀನೆ, ಕೇದಾರ್ನಾಥ್ ಸೇರಿದಂತೆ ಹಲವು ಸಿನಿಮಾಗಳಿಗೆ ವಿಕ್ರಮ್ ಗಾಯಕ್​ವಾಡ್ ಅವರು ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಹಲವು ಸೆಲೆಬ್ರಿಟಿಗಳ ಕಂಬನಿ ಮಿಡಿಯುತ್ತಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.

‘ವಿಕ್ರಮ್ ಗಾಯಕ್​​ವಾಡ್ ಅವರು ಅಪ್ಪಟ ಕಲಾಕಾರ ಆಗಿದ್ದರು. ಅವರ ಕೆಲಸದಿಂದಾಗಿ ಅನೇಕ ಕಲಾವಿದರು ಮರೆಯಲಾದ ಪಾತ್ರಗಳಾಗಿ ಕಾಣಿಸಿಕೊಂಡರು. ವಿಕ್ರಮ್ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ದಾದ’ ಎಂದು ಆಮಿರ್ ಖಾನ್ ಅವರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದಕ್ಷಿಣದವರನ್ನು ನೋಡಿ ಬಾಲಿವುಡ್​ ಮಂದಿ ಕಲಿಯಬೇಕು: ಆಮಿರ್ ಖಾನ್

‘ಭಾರತದ ರಿಯಲಿಸ್ಟಿಕ್ ಸಿನಿಮಾಗಳಿಗೆ ವಿಕ್ರಮ್ ಗಾಯಕ್​ವಾಡ್ ಅವರು ಆಸ್ತಿಯಾಗಿದ್ದರು. ಅವರು ಕೇವಲ ಮೇಕಪ್ ಮಾಡುತ್ತಿರಲಿಲ್ಲ. ಪಾತ್ರಗಳಿಗೆ ಜೀವ ಕೊಡುತ್ತಿದ್ದರು. ಅವರ ಕೆಲಸವನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಕಲಾಕಾರನಿಗೆ ಸಾವಿಲ್ಲ’ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:15 am, Sun, 11 May 25