ಬಾಲಿವುಡ್ ಸ್ಟಾರ್ ನಟಿಗೆ ಠಕ್ಕರ್, ಅವಕಾಶ ಕಸಿದುಕೊಂಡ ಶ್ರೀಲೀಲಾ
Sreeleela: ಕನ್ನಡದ ಬಳಿಕ ತೆಲುಗಿಗೆ ಹೋಗಿ ಅಲ್ಲಿ ಟಾಪ್ ನಟಿಯಾದ ಶ್ರೀಲೀಲಾ ಈಗ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದು ಅಲ್ಲಿಯೂ ಸಹ ಅವಕಾಶಗಳ ಮೇಲೆ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ನ ಸ್ಟಾರ್ ಯುವನಟಿಯ ಅವಕಾಶವನ್ನು ಬಾಚಿಕೊಂಡಿದ್ದಾರೆ ನಟಿ ಶ್ರೀಲೀಲಾ. ಯಾರು ಆ ನಟಿ? ಆ ಸಿನಿಮಾ ಯಾವುದು? ಇಲ್ಲಿದೆ ಪೂರ್ಣ ಮಾಹಿತಿ...

ಕನ್ನಡ ಸಿನಿಮಾ (Sandalwood) ಮೂಲಕ ನಟನೆ ಆರಂಭಿಸಿದ ಬೆಂಗಳೂರಿನ ಹುಡುಗಿ ಶ್ರೀಲೀಲಾ ಕನ್ನಡದ ಬಳಿಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು, ಅಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ತಮ್ಮ ನಟನಾ ಪ್ರತಿಭೆ, ನೃತ್ಯದಿಂದ ನಂಬರ್ 1 ನಟಿಯಾದರು. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶ ಬಾಚಿಕೊಂಡರು. ಇದೀಗ ಬಾಲಿವುಡ್ಗೆ ಹಾರಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಕೆಂಪು ಹಾಸಿನ ಸ್ವಾಗತ ದೊರೆತಿದೆ. ಶ್ರೀಲೀಲಾ ನಟನೆಯ ಒಂದೇ ಒಂದು ಬಾಲಿವುಡ್ ಸಿನಿಮಾದ ಚಿತ್ರೀಕರಣ ಸಹ ಪೂರ್ಣವಾಗಿಲ್ಲ ಅಷ್ಟರಲ್ಲಾಗಲೇ ಶ್ರೀಲೀಲಾಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ.
ಶ್ರೀಲೀಲಾ ಈಗಾಗಲೇ ಮೂರು ಹಿಂದಿ ಸಿನಿಮಾಗಳಿಗೆ ಸಹಿ ಮಾಡಿದ್ದು ಒಂದು ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆ ಇದೀಗ ಬಾಲಿವುಡ್ನ ಸ್ಟಾರ್ ಯುವನಟಿಗೆ ಸಿಕ್ಕಿದ್ದ ಅವಕಾಶವನ್ನೂ ಸಹ ಬಾಚಿಕೊಂಡಿದ್ದಾರೆ ಶ್ರೀಲೀಲಾ. ಅದೂ ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಬಾಲಿವುಡ್ ಸ್ಟಾರ್ ನಟರು ನಟಿಸುತ್ತಿರುವ ಸಿನಿಮಾನಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.
ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾನಲ್ಲಿ ನಟಿಸಬೇಕು ಎಂಬುದು ಬಹುತೇಕ ಬಾಲಿವುಡ್ ಯುವ ನಟ-ನಟಿಯರ ಕನಸು. ಅದರಂತೆ ಈಗ ಶ್ರೀಲೀಲಾಗೆ ಧರ್ಮಾ ಪ್ರೊಡಕ್ಷನ್ಸ್ ಸಿನಿಮಾನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಈಗಾಗಲೇ ಬಾಲಿವುಡ್ನ ಸ್ಟಾರ್ ಯುವನಟಿಯನ್ನು ಆಯ್ಕೆ ಮಾಡಲಾಗಿದ್ದ ಪಾತ್ರಕ್ಕೆ ಈಗ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಬ್ಯಾಕ್ಲೆಸ್ನಲ್ಲಿ ಮಿಂಚಿದ ನಟಿ ಶ್ರೀಲೀಲಾ
ಕರಣ್ ಜೋಹರ್ ಈ ಹಿಂದೆ ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಅವರನ್ನು ಹಾಕಿಕೊಂಡು ‘ದೋಸ್ತಾನ’ ಸಿನಿಮಾ ಮಾಡಿದ್ದರು. ಇದೀಗ ಸುಮಾರು 17 ವರ್ಷದ ಬಳಿಕ ಮತ್ತೆ ‘ದೋಸ್ತಾನಾ 2’ ಸಿನಿಮಾ ಮಾಡಲು ಕರಣ್ ಜೋಹರ್ ಮುಂದಾಗಿದ್ದು, ಈ ಸಿನಿಮಾದ ನಾಯಕಿಯಾಗಿ ಕರಣ್ರ ಮೆಚ್ಚಿನ ನಟಿ ಜಾನ್ಹವಿ ಕಪೂರ್ ಅನ್ನು ಆಯ್ಕೆ ಮಾಡಲಾಗಿತ್ತು. ಸಿನಿಮಾದ ನಾಯಕನಾಗಿ ಕಾರ್ತಿಕ್ ಆರ್ಯನ್ ಮತ್ತು ಲಕ್ಷ್ಯ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಜಾನ್ಹವಿ ನಟಿಸಬೇಕಿದ್ದ ಪಾತ್ರಕ್ಕೆ ಶ್ರೀಲೀಲಾ ಎಂಟ್ರಿ ಆಗಿದೆ.
‘ದೋಸ್ತಾನ 2’ ಸಿನಿಮಾ ಇಬ್ಬರು ಸಲಿಂಗಿಗಳ ನಡುವೆ ನಡೆವ ಹಾಸ್ಯಮಯ ಕತೆ ಒಳಗೊಂಡಿದೆ. ಸಿನಿಮಾನಲ್ಲಿ ಶ್ರೀಲೀಲಾ ನಾಯಕಿ. ಅಂದಹಾಗೆ ಸಿನಿಮಾದ ನಾಯಕನ ಸ್ಥಾನಕ್ಕೆ ಕಾರ್ತಿಕ್ ಆರ್ಯನ್ ಬದಲಿಗೆ ವಿಕ್ರಾಂತ್ ಮೆಸ್ಸಿ ಅವರನ್ನು ಆಯ್ಕೆ ಮಾಡಿದ್ದಾರೆ ಕರಣ್ ಜೋಹರ್. ಆದರೆ ಲಕ್ಷ್ಯ ಪಾತ್ರ ಹಾಗೆಯೇ ಇರಲಿದೆ. ಅಂದಹಾಗೆ ಶ್ರೀಲೀಲಾ, ಈಗಾಗಲೇ ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Sat, 10 May 25




