‘ರಾಜಕೀಯ ಒತ್ತಡದಿಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮೋತ್ಸವಕ್ಕೆ ಬಂತು’; ಇಸ್ರೇಲ್ ನಿರ್ದೇಶಕ ನಡಾವ್
‘ಕೆಟ್ಟ ಸಿನಿಮಾಗಳನ್ನು ಮಾಡುವುದು ಅಪರಾಧವಲ್ಲ. ಆದರೆ ಇದು (ದಿ ಕಾಶ್ಮೀರ್ ಫೈಲ್ಸ್) ಹಾಗಲ್ಲ. ಇದೊಂದು ಕೆಟ್ಟ ಪ್ರಚಾರದ ಸಿನಿಮಾ. ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಮಾತು ಆರಂಭಿಸಿದ್ದಾರೆ ನಡಾವ್.
ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವ ಮೂಲಕ ಸದ್ದು ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಈಗ ಮತ್ತೆ ಚರ್ಚೆಯಲ್ಲಿದೆ. ಈ ಚಿತ್ರದ ಬಗ್ಗೆ ಇಸ್ರೇಲ್ ನಿರ್ದೇಶಕ, ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದ ಜ್ಯೂರಿ ಸಮಿತಿ ಅಧ್ಯಕ್ಷ ನಡಾವ್ ಲಪಿಡ್ (Nadav Lapid) ಅವರು ಅಪಸ್ವರ ತೆಗೆದಿದ್ದರು. ಇದೊಂದು ಅಶ್ಲೀಲ ಹಾಗೂ ಪ್ರಚಾರದ ಸಿನಿಮಾ ಎಂದು ತೆಗಳಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಗೆ ಒಳಗಾಯಿತು. ಈ ಹೇಳಿಕೆ ಬೆನ್ನಲ್ಲೇ ಭಾರತದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕೆಲವರು ಸಿನಿಮಾ ಪರ ವಹಿಸಿಕೊಂಡು ಮಾತನಾಡಿದರೆ ಇನ್ನೂ ಕೆಲವರು ನಡಾವ್ ವಿರುದ್ಧ ಘೋಷಣೆ ಕೂಗಿದರು. ಅವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಈಗ ನಡಾವ್ ಅವರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಹೇಳಿಕೆಗೆ ವಿರೋಧ ವ್ಯಕ್ತವಾದ ಕುರಿತು ನಡಾವ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಅವರು ಹೇಳಿದ್ದಾರೆ. ‘ಕೆಟ್ಟ ಸಿನಿಮಾಗಳನ್ನು ಮಾಡುವುದು ಅಪರಾಧವಲ್ಲ. ಆದರೆ ಇದು (ದಿ ಕಾಶ್ಮೀರ್ ಫೈಲ್ಸ್) ಹಾಗಲ್ಲ. ಇದೊಂದು ಕೆಟ್ಟ ಪ್ರಚಾರದ ಸಿನಿಮಾ. ಅಂತಾರಾಷ್ಟ್ರೀಯ ಜ್ಯೂರಿ ಆಗಿ ನನಗೆ ಏನನ್ನಿಸುತ್ತದೆಯೋ ಅದನ್ನು ಮಾತನಾಡಬೇಕಿತ್ತು. ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಮಾತು ಆರಂಭಿಸಿದ್ದಾರೆ ಅವರು.
‘ಶೀಘ್ರದಲ್ಲೇ ಅಂತಹುದೇ ಪರಿಸ್ಥಿತಿ ಇಸ್ರೇಲ್‌ನಲ್ಲಿ ನಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ ವಿದೇಶಿ ತೀರ್ಪುಗಾರರ ಮುಖ್ಯಸ್ಥರು ಅವರು ನೋಡಿದಂತೆ ವಿಷಯಗಳನ್ನು ಹೇಳಲು ಸಿದ್ಧರಿದ್ದರೆ ನಾನು ಸಂತೋಷಪಡುತ್ತೇನೆ. ನನ್ನನ್ನು ಆಹ್ವಾನಿಸಿದ ಸ್ಥಳಕ್ಕೆ ಇದು ನನ್ನ ಕರ್ತವ್ಯ ಎಂದು ನಾನು ಭಾವಿಸಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Anupam Kher: ‘ಆ ವ್ಯಕ್ತಿಯೇ ಅಶ್ಲೀಲ, ಅವಕಾಶವಾದಿ’: ನಡಾವ್ ಲಪಿಡ್ ಬಗ್ಗೆ ಅನುಪಮ್ ಖೇರ್ ಗರಂ
‘ರಾಜಕೀಯ ಒತ್ತಡದಿಂದ ಈ ಸಿನಿಮಾ ಸ್ಪರ್ಧೆಗೆ ಬಂದಿದೆ ಎಂದು ನಮಗೆ ತಿಳಿಯಿತು. ನಿಮಗೆ ವೇದಿಕೆ ಮೇಲೆ ನಿಂತು ಮಾತನಾಡಲು ಹೇಳಿದರೆ ಏನು ಮಾತನಾಡುತ್ತೀರಿ? ಸಮುದ್ರ ತೀರಗಳ ಬಗ್ಗೆ ಮಾತ್ರವೇ? ನೀವು ನೋಡಿದ ಹಾಗೂ ತಿಂದ ಊಟದ ಬಗ್ಗೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.
ನಡಾವ್ ಹೇಳಿದ್ದೇನು?
ನಡಾವ್ ಲಪಿಡ್ ಹೇಳಿದ್ದೇನು?
‘ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಿ ನಾವು 15 ಚಿತ್ರಗಳನ್ನು ನೋಡಿದೆವು. 14 ಸಿನಿಮಾಗಳು ಗುಣಮಟ್ಟದಿಂದ ಕೂಡಿದ್ದು, ಚರ್ಚೆ ಹುಟ್ಟುಹಾಕಿದವು. ಆದರೆ 15ನೇ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ನೋಡಿ ನಮಗೆಲ್ಲ ಶಾಕ್ ಆಯಿತು. ಅದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಅಂತ ನನಗೆ ಅನಿಸಿತು. ಇಂಥ ಪ್ರತಿಷ್ಠಿತ ಸಿನಿಮೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಇರಲು ಅದು ಸೂಕ್ತವಲ್ಲ ಎನಿಸಿತು. ಈ ವೇದಿಕೆಯಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸಲು ನಾನು ಕಂಫರ್ಟಬಲ್ ಆಗಿದ್ದೇನೆ. ಸಿನಿಮೋತ್ಸವದಲ್ಲಿ ಈ ವಿಮರ್ಶಾತ್ಮಕ ಚರ್ಚೆಯನ್ನು ಒಪ್ಪಿಕೊಳ್ಳಬಹುದು. ಬದುಕಿಗೆ ಮತ್ತು ಕಲೆಗೆ ಅದು ಅವಶ್ಯಕ’ ಎಂದು ನಡಾವ್ ಲಪಿಡ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Thu, 1 December 22