‘ಇನ್ಮುಂದೆ ಹೀಗೆ ಮಾಡಲ್ಲ, ಕ್ಷಮಿಸಿ’: ಅಭಿಮಾನಿಗೆ ಹೊಡೆದು ಕ್ಷಮೆ ಕೇಳಿದ ನಾನಾ ಪಾಟೇಕರ್
ವಿಡಿಯೋ ವೈರಲ್ ಆದ ಬಳಿಕ ‘ಇದು ಸಿನಿಮಾದ ಒಂದು ದೃಶ್ಯ’ ಎಂದು ‘ಜರ್ನಿ’ ಚಿತ್ರತಂಡದವರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ‘ನಾವು ರಿಹರ್ಸಲ್ ಮಾಡುತ್ತಿದ್ದೆವು. 2ನೇ ಬಾರಿ ರಿಹರ್ಸಲ್ ಮಾಡುವಾಗ ಈ ಹುಡುಗ ಬಂದ. ಅವನು ನಮ್ಮ ತಂಡದವನೇ ಅಂತ ನಾನು ಭಾವಿಸಿದ್ದೆ’ ಎಂದು ನಾನಾ ಪಾಟೇಕರ್ ಹೇಳಿದ್ದಾರೆ.
ನಟ ನಾನಾ ಪಾಟೇಕರ್ (Nana Patekar) ಅವರು ಅಭಿಮಾನಿಗೆ ಹೊಡೆದು ವಿವಾದಕ್ಕೆ ಸಿಲುಕಿದ್ದಾರೆ. ತಮ್ಮ ಜೊತೆ ಫೋಟೋ ತೆಗೆದುಕೊಳ್ಳಲು ಬಂದ ಹುಡುಗನಿಗೆ ಅವರು ಹೊಡೆದ ವಿಡಿಯೋ ವೈರಲ್ (Nana Patekar Viral Video) ಆಗಿತ್ತು. ಈ ಕೃತ್ಯಕ್ಕೆ ಎಲ್ಲರಿಂದ ಟೀಕೆ ವ್ಯಕ್ತವಾದ ಬಳಿಕ ನಾನಾ ಪಾಟೇಕರ್ ಅವರು ಕ್ಷಮೆ ಕೇಳಿದ್ದಾರೆ. ‘ಈವರೆಗೂ ನಾನು ಯಾರಿಗೂ ಫೋಟೋ ಕೊಡಲ್ಲ ಎಂದು ಹೇಳಿರಲಿಲ್ಲ. ಅಚಾತುರ್ಯದಿಂದ ಹೀಗೆ ಆಗಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಇನ್ಮುಂದೆ ಹೀಗೆ ಮಾಡುವುದಿಲ್ಲ. ಆ ಹುಡುಗನ ಬಳಿ ನಾನು ನೇರವಾಗಿ ಕ್ಷಮೆ ಕೇಳುವವನಿದ್ದೆ. ಆದರೆ ಆತ ಭಯದಿಂದ ಓಡಿಹೋದ’ ಎಂದು ಅವರು ಹೇಳಿದ್ದಾರೆ. ಅವರು ಕ್ಷಮೆ (Nana Patekar Apology) ಕೇಳಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.
ಏನಿದು ಘಟನೆ?
‘ಜರ್ನಿ’ ಚಿತ್ರದ ಚಿತ್ರೀಕರಣದಲ್ಲಿ ನಾನಾ ಪಾಟೇಕರ್ ಅವರು ತೊಡಗಿಕೊಂಡಿದ್ದಾರೆ. ವಾರಾಣಸಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಅವರು ತೊಡಗಿದ್ದಾಗ ಒಬ್ಬ ಅಭಿಮಾನಿಯು ನಾನಾ ಪಾಟೇಕರ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದಿದ್ದಾನೆ. ಆಗ ನಾನಾ ಪಾಟೇಕರ್ಗೆ ತೀವ್ರ ಸಿಟ್ಟು ಬಂದಿದೆ. ಮೊಬೈಲ್ ಹಿಡಿದುಕೊಂಡು ಸೆಲ್ಫಿ ಕೇಳಲು ಬಂದ ಹುಡುಗನ ತಲೆಗೆ ಅವರು ಹೊಡೆದಿದ್ದಾರೆ. ಕೂಡಲೇ ಸೆಟ್ನಲ್ಲಿದ್ದ ಇನ್ನುಳಿದ ಸಿಬ್ಬಂದಿ ಕೂಡ ಆ ಹುಡುಗನ ಕುತ್ತಿಗೆ ಹಿಡಿದು ಹೊರಗೆ ದೂಡಿದ್ದಾರೆ. ಇದನ್ನು ನೆಟ್ಟಿಗರು ಖಂಡಿಸಿದ್ದಾರೆ.
View this post on Instagram
ಸಿನಿಮಾದ ದೃಶ್ಯ ಎಂದು ತೇಪೆ:
ವಿಡಿಯೋ ವೈರಲ್ ಆದ ಬಳಿಕ ‘ಇದು ಸಿನಿಮಾದ ಒಂದು ದೃಶ್ಯ’ ಎಂದು ‘ಜರ್ನಿ’ ಚಿತ್ರತಂಡದವರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ‘ನಾನು ಒಬ್ಬ ಹುಡುಗನಿಗೆ ಹೊಡೆದ ವಿಡಿಯೋ ವೈರಲ್ ಆಗಿದೆ. ಅದು ನಮ್ಮ ಸಿನಿಮಾದ ಶೂಟಿಂಗ್ ಸನ್ನಿವೇಶ. ಏ ಮುದಕ.. ನೀನು ಟೋಪಿ ಮಾರುತ್ತೀಯಾ ಅಂತ ಒಬ್ಬ ಹುಡುಗ ಬಂದು ನನ್ನನ್ನು ಕೇಳುವ ದೃಶ್ಯ ಅದು. ಆತನಿಗೆ ನಾನು ಹೊಡೆದ ಕಳಿಸಬೇಕಿತ್ತು. ಅದರ ರಿಹರ್ಸಲ್ ಮಾಡುತ್ತಿದ್ದೆವು. ಎರಡನೇ ಬಾರಿ ರಿಹರ್ಸಲ್ ಮಾಡುವಾಗ ಈ ಹುಡುಗ ಬಂದ. ಇವನು ನಮ್ಮ ತಂಡದವನೇ ಎಂದು ನಾನು ಭಾವಿಸಿದ್ದೆ. ಆದರೆ ಆತ ಬೇರೆ ಯಾರೋ ಆಗಿದ್ದ. ಕೂಡಲೇ ಅವನು ಓಡಿ ಹೋದ. ಆತನ ಸ್ನೇಹಿತರು ಈ ವಿಡಿಯೋ ಶೂಟ್ ಮಾಡಿದ್ದಾರೆ’ ಎಂದು ನಾನಾ ಪಾಟೇಕರ್ ಹೇಳಿದ್ದಾರೆ.
View this post on Instagram
ನಾನಾ ಪಾಟೇಕರ್ ಅವರಿಗೆ ವಿವಾದ ಹೊಸದಲ್ಲ. ಈ ಹಿಂದೆ ಅವರ ಮೇಲೆ ನಟಿ ತನುಶ್ರೀ ದತ್ತ ಅವರು ಮೀಟೂ ಆರೋಪ ಹೊರಿಸಿದ್ದರು. ಈಗ ಹುಡುಗನಿಗೆ ಹೊಡೆದ ಕಾರಣಕ್ಕೆ ಅವರು ಸುದ್ದಿ ಆಗುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಪೋಷಕ ಪಾತ್ರ ಸೇರಿದಂತೆ ಎಲ್ಲ ರೀತಿಯ ಪಾತ್ರಗಳ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.