ರೇವ್​ ಪಾರ್ಟಿ ಮೇಲೆ ದಾಳಿ: ಬಾಲಿವುಡ್ ಸೂಪರ್​ ಸ್ಟಾರ್​ ನಟನ ಪುತ್ರ ಎನ್​ಸಿಬಿ ವಶಕ್ಕೆ

| Updated By: ಮದನ್​ ಕುಮಾರ್​

Updated on: Oct 03, 2021 | 8:10 AM

ದೆಹಲಿ ಮೂಲದ ಕಂಪನಿಯೊಂದು ಈ ಪಾರ್ಟಿಯನ್ನು ಆಯೋಜಿಸಿತ್ತು. ಪಾರ್ಟಿಯಲ್ಲಿ ಭಾಗವಹಿಸುವ ಪ್ರತಿ ವ್ಯಕ್ತಿಗೆ 80 ಸಾವಿರ ರೂ. ದರ ನಿಗದಿ ಮಾಡಲಾಗಿತ್ತು ಎಂಬ ಮಾಹಿತಿ ಕೇಳಿಬಂದಿದೆ.

ರೇವ್​ ಪಾರ್ಟಿ ಮೇಲೆ ದಾಳಿ: ಬಾಲಿವುಡ್ ಸೂಪರ್​ ಸ್ಟಾರ್​ ನಟನ ಪುತ್ರ ಎನ್​ಸಿಬಿ ವಶಕ್ಕೆ
ಐಷಾರಾಮಿ ಹಡಗಿನ ಮೇಲೆ ರೇವ್​ ಪಾರ್ಟಿ
Follow us on

ಸೆಲೆಬ್ರಿಟಿಗಳು, ಶ್ರೀಮಂತರು ಡ್ರಗ್ಸ್​ ಪಾರ್ಟಿ ಮಾಡಿ ಸಿಕ್ಕಿ ಬೀಳುವ ಪ್ರಸಂಗ ಹೆಚ್ಚುತ್ತಲೇ ಇದೆ. ಎಷ್ಟೇ ಕೇಸ್​ಗಳು ಜಡಿದರೂ ಮಾದಕ ದ್ರವ್ಯದ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಮುಂಬೈನ ಕಡಲ ತೀರದಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದ ಅನೇಕರನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶನಿವಾರ (ಅ.2) ಮಧ್ಯರಾತ್ರಿ ಈ ದಾಳಿ ನಡೆದಿದೆ. ಈ ಪಾರ್ಟಿಯಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್​ ನಟರೊಬ್ಬರ ಮಗ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರ ಗುರುತು ಇನ್ನೂ ಬಹಿರಂಗ ಆಗಿಲ್ಲ. ಒಟ್ಟು 10 ಜನರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.

ವಾಣಿಜ್ಯ ನಗರ ಮುಂಬೈನ ಕಡಲ ತೀರಿದಲ್ಲಿ ಐಷಾರಾಮಿ ಹಡಗಿನ ಮೇಲೆ ಈ ಪಾರ್ಟಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಎನ್​ಸಿಬಿ ಅಧಿಕಾರಿಗಳ ಬಲೆಗೆ ಹೈಪ್ರೊಫೈಲ್​ ವ್ಯಕ್ತಿಗಳ ಮಕ್ಕಳು ಸಿಕ್ಕಿ ಬಿದ್ದಿದ್ದಾರೆ. ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್​ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್​ನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.

ತಮಗೆ ಸಿಕ್ಕ ಸುಳಿವು ಆಧರಿಸಿ ಎನ್​ಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ಆರಂಭಿಸಿದ್ದರು. ಅವರು ಪ್ರಯಾಣಿಕರ ರೀತಿ ಹಡಗಿನಲ್ಲಿ ಸೇರಿಕೊಂಡಿದ್ದರು. ಆ ಹಡಗು ಮಧ್ಯ ಸಮುದ್ರ ಸೇರುತ್ತಿದ್ದಂತೆಯೇ ರೇವ್​ ಪಾರ್ಟಿ ಪ್ರಾರಂಭ ಆಗಿರುವುದು ಅವರ ಗಮನಕ್ಕೆ ಬಂತು. ಕೂಡಲೇ ದಾಳಿ ನಡೆಸಿದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಯಶಸ್ವಿ ಆಗಿದ್ದಾರೆ. ವಶಕ್ಕೆ ಪಡೆಯಲಾದ 10 ಜನರಲ್ಲಿ ಇಬ್ಬರು ಹರಿಯಾಣ ಮತ್ತು ದೆಹಲಿ ಮೂಲದ ಡ್ರಗ್​ ಪೆಡ್ಲರ್​ಗಳು ಎನ್ನಲಾಗಿದೆ.

ದೆಹಲಿ ಮೂಲದ ಕಂಪನಿಯೊಂದು ಈ ಪಾರ್ಟಿಯನ್ನು ಆಯೋಜಿಸಿತ್ತು. ಪಾರ್ಟಿಯಲ್ಲಿ ಭಾಗವಹಿಸುವ ಪ್ರತಿ ವ್ಯಕ್ತಿಗೆ 80 ಸಾವಿರ ರೂ. ದರ ನಿಗದಿ ಮಾಡಲಾಗಿತ್ತು ಎಂಬ ಮಾಹಿತಿ ಕೇಳಿಬಂದಿದೆ. ತನಿಖೆ ಬಳಿಕ ಹೆಚ್ಚಿನ ಸತ್ಯ ಬಹಿರಂಗ ಆಗಬೇಕಿದೆ.

ಇದನ್ನೂ ಓದಿ:

‘ಡ್ರಗ್ಸ್​ ಎಂಬುದು ಸಿನಿಮಾರಂಗಕ್ಕೆ ಸೀಮಿತ ಅಲ್ಲ, ಇದು ಟಿಆರ್​ಪಿ ವಿಷಯವಲ್ಲ’: ನಟ ಚೇತನ್​

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ