AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​​ ಅವರ ಒಂದು ಫೈಟ್​​ಗೆ 6.5 ವರ್ಷ ಶ್ರಮ, ‘ರಾಮಾಯಣ’ಕ್ಕೆ ಪಟ್ಟ ಕಷ್ಟ ವಿವರಿಸಿದ ನಿರ್ದೇಶಕ

ಈ ಸಿನಿಮಾಕ್ಕಾಗಿ ನಿರ್ದೇಶಕರು, ಇತರೆ ಕೆಲವು ತಂತ್ರಜ್ಞರು ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ನಟಿ ಸಾಯಿ ಪಲ್ಲವಿ ಕೆಲ ದಿನಗಳ ಹಿಂದೆ ಹೇಳಿದ್ದರು. ಇದೀಗ ಖುದ್ದು ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ಅವರು ಈ ಸಿನಿಮಾಕ್ಕಾಗಿ ತಾವು ಪಟ್ಟ ಶ್ರಮ ಎಂಥಹದ್ದು ಎಂದು ವಿವರಿಸಿದ್ದಾರೆ. ವಿಶೇಷವೆಂದರೆ ಸಿನಿಮಾನಲ್ಲಿ ಬರುವ ಯಶ್ ಅವರ ಒಂದು ಫೈಟ್​​ ದೃಶ್ಯವನ್ನು ಸರಿಯಾಗಿ ಕಂಪೋಸ್ ಮಾಡಲು ಆರುವರೆ ವರ್ಷ ಸಮಯ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಯಶ್​​ ಅವರ ಒಂದು ಫೈಟ್​​ಗೆ 6.5 ವರ್ಷ ಶ್ರಮ, ‘ರಾಮಾಯಣ’ಕ್ಕೆ ಪಟ್ಟ ಕಷ್ಟ ವಿವರಿಸಿದ ನಿರ್ದೇಶಕ
Yash Ravana
ಮಂಜುನಾಥ ಸಿ.
|

Updated on: Nov 01, 2026 | 8:22 PM

Share

ಮುಖ್ಯಾಂಶಗಳು

  • ಯಶ್​ ಫೈಟ್​​ ಸಂಯೋಜಿಸಲು 6.5 ವರ್ಷ ಶ್ರಮ
  • ‘ರಾಮಾಯಣ’ ಸಿನಿಮಾ ಹಿಂದಿದೆ ವರ್ಷಗಳ ಕಷ್ಟ
  • ರಾವಣ-ಜಟಾಯು ಫೈಟ್​​ನ ವಿಶೇಷತೆ ಏನು?

‘ರಾಮಾಯಣ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಿನಿಮಾಕ್ಕಾಗಿ ನಿರ್ದೇಶಕರು, ಇತರೆ ಕೆಲವು ತಂತ್ರಜ್ಞರು ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ನಟಿ ಸಾಯಿ ಪಲ್ಲವಿ ಕೆಲ ದಿನಗಳ ಹಿಂದೆ ಹೇಳಿದ್ದರು. ಇದೀಗ ಖುದ್ದು ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ಅವರು ಈ ಸಿನಿಮಾಕ್ಕಾಗಿ ತಾವು ಪಟ್ಟ ಶ್ರಮ ಎಂಥಹದ್ದು ಎಂದು ವಿವರಿಸಿದ್ದಾರೆ. ವಿಶೇಷವೆಂದರೆ ಸಿನಿಮಾನಲ್ಲಿ ಬರುವ ಯಶ್ ಅವರ ಒಂದು ಫೈಟ್​​ ದೃಶ್ಯವನ್ನು ಸರಿಯಾಗಿ ಕಂಪೋಸ್ ಮಾಡಲು ಆರುವರೆ ವರ್ಷ ಸಮಯ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ಯಶ್, ರಾವಣನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ರಾವಣ ಮತ್ತು ಜಟಾಯುವಿನ ನಡುವೆ ನಡೆದ ಯುದ್ಧ ಬಹಳ ಮಹತ್ವವಾದುದು. ಅದು ರಾಮಾಯಣದ ಬಹುಮುಖ್ಯ ಭಾಗವಾಗಿದ್ದು, ನಿತೇಶ್ ತಿವಾರಿ ಅವರ ಚಿತ್ರದ ಮೂಲಕ ಇದನ್ನು ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ವೀಕ್ಷಿಸಲಿದ್ದಾರೆ. ಆದರೆ ಈ ಒಂದು ಸಾಹಸ ದೃಶ್ಯವನ್ನು ಪೂರ್ಣಗೊಳಿಸಲು ಚಿತ್ರತಂಡ ಬರೋಬ್ಬರಿ ಆರುವರೆ ವರ್ಷ ತೆಗೆದುಕೊಂಡಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ನಿತೇಶ್, ‘ರಾವಣ ಮತ್ತು ಜಟಾಯು ನಡುವಿನ ಕಾಳಗವನ್ನು ಪೂರ್ಣಗೊಳಿಸಲು ನಮಗೆ ಎಷ್ಟು ಸಮಯ ಬೇಕಾಯಿತು ಗೊತ್ತೇ? ನಾನು ಹಿಂದಿನ ಕಲಾವಿದರಿಗೆ ವಿವರಣೆ ನೀಡಿದಂದಿನಿಂದ ಸಂಪೂರ್ಣ ದೃಶ್ಯ ಮುಗಿಯುವವರೆಗೆ ಆರುವರೆ ವರ್ಷಗಳೇ ಬೇಕಾದವು. ಕೇವಲ ಒಂದೇ ಒಂದು ಆಕ್ಷನ್ ದೃಶ್ಯ. ಪ್ರತಿಯೊಂದನ್ನೂ ಆರಂಭದಿಂದ ನಿರ್ಮಿಸಲು ಎಷ್ಟು ಶ್ರಮ ಪಡಲಾಗಿದೆ ಎಂದು ಹೇಳಲು ನಾನು ಗಂಟೆಗಟ್ಟಲೆ ಮಾತನಾಡಬಲ್ಲೆ. ಇದಕ್ಕಾಗಿ ಸಾವಿರಾರು ಜನರು ಹಗಲಿರುಳು ಶ್ರಮಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಮೂಲಕ ಸಿನಿಮಾ ವೀಕ್ಷಣೆಯ ಮೊದಲ ಅನುಭವ ಪಡೆದ ಯಶ್ ಮಕ್ಕಳು

ಈ ಚಿತ್ರಕ್ಕಾಗಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ ಎಂದಿರುವ ನಿರ್ದೇಶಕರು, ಮತ್ತೊಂದು ಸ್ವಾರಸ್ಯಕರ ವಿಚಾರ ಹಂಚಿಕೊಂಡಿದ್ದಾರೆ. ಪೌರಾಣಿಕ ಕಥೆಯ ರಾವಣನ ಪ್ರಸಿದ್ಧ ‘ಪುಷ್ಪಕ ವಿಮಾನ’ದ ವಿನ್ಯಾಸವನ್ನು ಸರಿಯಾಗಿ ರೂಪಿಸಲು ಚಿತ್ರತಂಡಕ್ಕೆ ಸುಮಾರು ಎರಡು ವರ್ಷಗಳು ಬೇಕಾದವಂತೆ. ಅಂತಿಮ ರೂಪುರೇಷೆ ಸಿದ್ಧಪಡಿಸುವ ಮೊದಲು ತಂಡವು ಸುಮಾರು 40 ರಿಂದ 50 ವಿಭಿನ್ನ ವಿನ್ಯಾಸಗಳನ್ನು ರೂಪಿಸಿತ್ತು. ಚಿತ್ರತಂಡ ಮೊದಲು ಕಲ್ಪಿಸಿಕೊಂಡಿದ್ದಕ್ಕಿಂತ ಅಂತಿಮವಾಗಿ ಆಯ್ಕೆಯಾದ ವಿನ್ಯಾಸವು ಸಂಪೂರ್ಣವಾಗಿ ಭಿನ್ನವಾಗಿತ್ತು ಎಂದು ನಿತೇಶ್ ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ತಂಡಕ್ಕೆ ಮತ್ತೊಂದು ಸವಾಲು ಎದುರಾಯಿತು. ಏಕೆಂದರೆ ಆರಂಭಿಕ ವಿನ್ಯಾಸವನ್ನು ಆಧರಿಸಿ ಅವರು ರಾವಣ-ಜಟಾಯು ಕಾಳಗವನ್ನು ಸಿದ್ಧಪಡಿಸಿಕೊಂಡಿದ್ದರು. ಹೊಸ ಪುಷ್ಪಕ ವಿಮಾನದ ವಿನ್ಯಾಸ ಅಂತಿಮಗೊಂಡ ನಂತರ, ಅವರು ಆಕ್ಷನ್ ದೃಶ್ಯದ ಹಲವು ಭಾಗಗಳನ್ನು ಮತ್ತೆ ಮೊದಲಿನಿಂದ ಬದಲಾಯಿಸಬೇಕಾಯಿತಂತೆ.

‘ಅಂತಿಮ ವಿನ್ಯಾಸವನ್ನು ತಲುಪಲು ನಮಗೆ ಸುಮಾರು ಎರಡು ವರ್ಷ ಬೇಕಾಯಿತು. ಆ ನಂತರ ಅನೇಕ ಬದಲಾವಣೆಗಳನ್ನು ಮಾಡಬೇಕಾಗಿ ಬಂದಿದ್ದರಿಂದ ರಾವಣ ಮತ್ತು ಜಟಾಯು ಯುದ್ಧವನ್ನು ರೂಪಿಸಲು ನಮಗೆ ಇಷ್ಟೊಂದು ಸಮಯ ಹಿಡಿಯಿತು. ಏಕೆಂದರೆ ಆರಂಭದಲ್ಲಿ ಪುಷ್ಪಕ ವಿಮಾನ ಹೀಗೆಯೇ ಇರುತ್ತದೆ ಎಂದು ಊಹಿಸಿ ಆಕ್ಷನ್ ದೃಶ್ಯಗಳನ್ನು ಯೋಜಿಸಿದ್ದೆವು. ಆದರೆ ನಮಗೆ ಇಷ್ಟವಾದ ಅಂತಿಮ ವಿನ್ಯಾಸವು ನಾವು ಮೊದಲು ಅಂದುಕೊಂಡಿದ್ದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಹಾಗಾಗಿ ನಾವು ಆ ದೃಶ್ಯಗಳಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಯಿತು. ಅಂತಿಮಗೊಳಿಸುವ ಮುನ್ನ ಪುಷ್ಪಕ ವಿಮಾನಕ್ಕಾಗಿ 40-50 ವಿನ್ಯಾಸಗಳನ್ನು ಸೃಷ್ಟಿಸಿದ್ದೆವು. ಕೇವಲ ಹಾರುವಂತೆ ಕಾಣುವ ವಿಮಾನ ನಮಗೆ ಬೇಕಿರಲಿಲ್ಲ; ಅದರ ಹಿಂದೆ ಒಂದು ವೈಜ್ಞಾನಿಕ ಹಿನ್ನೆಲೆ ಇರಬೇಕೆಂದು ಬಯಸಿದ್ದೆವು. ಏಕೆಂದರೆ ಆ ಕಾಲದಲ್ಲಿ ನಡೆದ ಪ್ರತಿಯೊಂದರ ಹಿಂದೆಯೂ ವಿಜ್ಞಾನವಿತ್ತು ಎಂದು ನಾವು ಬಲವಾಗಿ ನಂಬುತ್ತೇವೆ’ ಎಂದು ನಿರ್ದೇಶಕರು ವಿವರಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಮೊದಲ ಭಾಗ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More