ಪರಿಣಿತಿ ಚೋಪ್ರಾ-ರಾಘವ್ ನಿಶ್ಚಿತಾರ್ಥಕ್ಕೆ ಹಲವು ಅತಥಿಗಳು, ವಿಶೇಷ ಖಾದ್ಯಗಳು
Parineeti-Raghav: ನಟಿ ಪರಿಣಿತಿ ಚೋಪ್ರಾ-ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಮೇ 13 ರಂದು ನಡೆಯಲಿದ್ದು, ನಿಶ್ಚಿತಾರ್ಥಕ್ಕೆ ಆಗಮಿಸುವ ಅತಿಥಿಗಳು ಹಾಗೂ ಖಾದ್ಯಗಳ ವೈವಿಧ್ಯತೆಯ ಬಗ್ಗೆ ಮಾಹಿತಿ.
ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಎಎಪಿ ಶಾಸಕ ರಾಘವ್ ಚಡ್ಡ (Raghav Chadha) ಕಳೆದ ಕೆಲ ತಿಂಗಳಿನಿಂದ ಒಟ್ಟಾಗಿ ಓಡಾಡುತ್ತಿದ್ದರು. ಇಬ್ಬರು ಶೀಘ್ರದಲ್ಲಿಯೇ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಅಂತೆಯೇ ಈ ಜೋಡಿ ತಮ್ಮನ್ನು ವಿವಾಹ ಬಂಧಕ್ಕೆ ಒಳಪಡಿಸಿಕೊಳ್ಳಲು ಸಜ್ಜಾಗಿದ್ದು, ಮದುವೆಗೆ ಮುಂಚೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಮೇ 13 ಅಂದರೆ ನಾಳೆಯೇ ದೆಹಲಿಯಲ್ಲಿ ಅದ್ಧೂರಿಯಾಗಿ ಈ ಜೋಡಿಯ ನಿಶ್ಚಿತಾರ್ಥ ಸಮಾರಂಭ ನಡೆಯಲಿದ್ದು, ಮದುವೆ ಸಮಾರಂಭಕ್ಕೆ ಕಡಿಮೆ ಇರದಂತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿ ಹಾಗೂ ಜನಪ್ರಿಯ ರಾಜಕಾರಣಿ ಇಬ್ಬರ ನಿಶ್ಚಿತಾರ್ಥ ಕಾರ್ಯಕ್ಕೆ ಎರಡೂ ಕ್ಷೇತ್ರಗಳಿಂದ ಹಲವು ಅತಿಥಿಗಳು ಆಗಮಿಸಲಿದ್ದಾರೆ. ಪರಿಣಿತಿ ಚೋಪ್ರಾಗಂತೂ ಬಾಲಿವುಡ್ನಲ್ಲಿ ಹಲವು ಗೆಳೆಯರಿದ್ದಾರೆ. ಕರಣ್ ಜೋಹರ್, ಅರ್ಜುನ್ ಕಪೂರ್, ಮನಿಷ್ ಮಲ್ಹೋತ್ರಾ, ಫರ್ಹಾ ಖಾನ್, ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್ ಇವರೆಲ್ಲರ ಜೊತೆಗೆ ಪರಿಣಿತಿ ಚೋಪ್ರಾರ ಅಕ್ಕನಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಸಹ ಆಗಮಿಸಲಿದ್ದಾರೆ. ಪ್ರಿಯಾಂಕಾ ಜೊತೆಗೆ ಅವರ ಪತಿ ನಿಕ್ ಜೋನಸ್ ಸಹ ಆಗಮಿಸುವ ನಿರೀಕ್ಷೆ ಇದೆ.
ಇನ್ನು ರಾಘವ್ ಚಡ್ಡಾ ಕಡೆಯಿಂದ ಅವರ ರಾಜಕೀಯ ರಂಗದ ಹಲವು ಗೆಳೆಯರು ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ನಿಶ್ಚಿತಾರ್ಥದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ರಾಘವ್ ಚಡ್ಡಾ ಉದ್ಯಮಿ ಸಹ ಆಗಿದ್ದು ದೆಹಲಿಯ ಕೆಲವು ಟಾಪ್ ರೇಟೆಡ್ ಉದ್ಯಮಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಪರಿಣಿತಿ ಚೋಪ್ರಾರ ಅಣ್ಣ ಸಹಜ್, ಆಹಾರ ಉದ್ಯಮಿಯೇ ಆಗಿದ್ದು ಅವರು ಹಾಗೂ ಅವರ ಮತ್ತೊಬ್ಬ ಸಹೋದರ ಶಿವಾಂಗ್ ಜಂಟಿಯಾಗಿ ಸಹೋದರಿಯ ನಿಶ್ಚಿತಾರ್ಥದ ಎಲ್ಲ ಕಾರ್ಯಕ್ರಮಗಳನ್ನು ಅರೇಂಜ್ ಮಾಡಿದ್ದಾರೆ. ಆಹಾರ ಖಾದ್ಯಗಳ ಬಗ್ಗೆ ವಿಶೇಷ ಕಾಳಜಿವಹಿಸಲಾಗಿದ್ದು ಆಗಮಿಸಲಿರುವ ಅತಿಥಿಗಳ ಆಯ್ಕೆ, ಇಷ್ಟಗಳನ್ನು ಆಧರಿಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಲಾಗುತ್ತಿದೆ. ನಿಶ್ಚಿತಾರ್ಥದ ಬಳಿಕ ವಿಶೇಷ ಪಾರ್ಟಿಯನ್ನು ಸಹ ಆಯೋಜಿಸಲಾಗಿದ್ದು, ಈ ಪಾರ್ಟಿಯಲ್ಲಿ ಕಬಾಬ್ ಥೀಮ್ನ ಆಹಾರ ಇರಲಿದೆ. ಹಲವು ಬಗೆಯ ಕಬಾಬ್ಗಳನ್ನು ಈ ಪಾರ್ಟಿಯಲ್ಲಿ ಅತಿಥಿಗಳಿಗೆ ನೀಡಲಾಗುತ್ತಿದೆ. ವೀಗನ್ ಆಪ್ಷನ್ ಅನ್ನು ಸಹ ನಿಶ್ಚಿತಾರ್ಥದಲ್ಲಿ ಇರಿಸಿದ್ದಾರೆ ಪರಿಣಿತಿ ಹಾಗೂ ರಾಘವ್.
ಪರಿಣಿತಿ ಚೋಪ್ರಾ ಕಳೆದ ಒಂದು ದಶಕದಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪರಿಣಿತಿ ನಟಿಸಿದ್ದ ಊಂಚಾಯಿ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಅನುಪಮ್ ಖೇರ್, ಬೊಮನ್ ಇರಾನಿ ನಟಿಸಿದ್ದರು. ಇದೀಗ ಇಮ್ತಿಯಾಜ್ ಖಾನ್ ನಿರ್ದೇಶನದ ಚಮ್ಕೀಲಾ ಹಾಗೂ ಅಕ್ಷಯ್ ಕುಮಾರ್ ನಟನೆಯ ಕ್ಯಾಪ್ಸೂಲ್ ಗಿಲ್ ಸಿನಿಮಾಗಳಲ್ಲಿ ಪರಿಣಿತಿ ನಟಿಸುತ್ತಿದ್ದಾರೆ.
ಇನ್ನು ರಾಘವ್ ಚಡ್ಡ ಕೇವಲ 26ನೇ ವಯಸ್ಸಿನಲ್ಲಿಯೇ ಎಎಪಿ ಪಕ್ಷದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದವರು. ಅರವಿಂದ್ ಕೇಜ್ರಿವಾಲ್ರ ಅತ್ಯಾಪ್ತರಲ್ಲಿ ಒಬ್ಬರಾಗಿರುವ ರಾಘವ್, ಪಂಜಾಬ್ನಲ್ಲಿ ಎಎಪಿ ಪಡೆದ ಅದ್ಭುತ ವಿಜಯದ ಹಿಂದೆ ಕೆಲಸ ಮಾಡಿದವರು. ಪಂಜಾಬ್ ಸರ್ಕಾರದ ಸಲಹೆಗಾರ ಸಮಿತಿಯ ಸದಸ್ಯರೂ ಆಗಿರುವ ರಾಘವ್ ಚಡ್ಡ ಪ್ರಸ್ತುತ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಸಂಸದರಾಗಿ ಆಯ್ಕೆ ಆದಾಗ ರಾಘವ್ ವಯಸ್ಸು ಕೇವಲ 33 ವರ್ಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ