
ಬಾಲಿವುಡ್ (Bollywood) ನಲ್ಲಿ ಅಪ್ಪ-ಮಕ್ಕಳ ಜೋಡಿ ಹಲವು ಇವೆ. ನಿರ್ದೇಶಕರಾಗಿರುವ ಹಲವರು ತಮ್ಮ ಮಕ್ಕಳನ್ನು ನಟರನ್ನಾಗಿ ಲಾಂಚ್ ಮಾಡಿದ್ದಾರೆ. ಕೆಲವರು ಗೆದ್ದರೆ, ಕೆಲವರು ಸೋತಿದ್ದಾರೆ. ಇನ್ನು ಕೆಲವರು ಆರಕ್ಕೇರದೆ, ಮೂರಕ್ಕಿಳಿಯದೇ ನಿಂತಿದ್ದಾರೆ. ಅವರಲ್ಲಿ ಪ್ರಮುಖವಾದ ನಟ ವರುಣ್ ಧವನ್. ಬಾಲಿವುಡ್ನ ಈ ನಟ ಆರಕ್ಕೇರದೆ-ಮೂರಕ್ಕಿಳಿಯದೆ ನಿಂತಿದ್ದಾರೆ. ಇದೀಗ ಬಾಲಿವುಡ್ನ ಹಿರಿಯ ನಿರ್ಮಾಪಕರೊಬ್ಬರು, ವರುಣ್ ಧವನ್ ಮತ್ತು ಅವರ ತಂದೆ ಡೇವಿಡ್ ಧವನ್ ಅವರನ್ನು ಟೀಕಿಸಿದ್ದು, ‘ಅಪ್ಪ-ಮಗನ ನಂಬಿ ಕೆಟ್ಟೆ’ ಎಂದಿದ್ದಾರೆ.
ವರುಣ್ ಧವನ್ ಅವರ ತಂದೆ ಡೇವಿಡ್ ಧವನ್ ಬಾಲಿವುಡ್ನ ಸೂಪರ್ ಹಿಟ್ ನಿರ್ದೇಶಕರಾಗಿದ್ದವರು. ಹಲವು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾಗಳನ್ನು 90-2000 ದಶಕದಲ್ಲಿ ಅವರು ನೀಡಿದ್ದಾರೆ. ಇದೀಗ ಮಗ ವರುಣ್ ಧವನ್ ಅವರನ್ನು ಹಾಕಿಕೊಂಡು ಸಾಲು-ಸಾಲು ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲೂ 90ರ ದಶಕದಲ್ಲಿ ತಾವೇ ನಿರ್ದೇಶಿಸಿದ ಸಿನಿಮಾಗಳ ಸೀಕ್ವೆಲ್ ಅನ್ನು ಈಗ ಪುತ್ರ ವರುಣ್ ಧವನ್ ಅನ್ನು ನಾಯಕನನ್ನಾಗಿ ಹಾಕಿಕೊಂಡು ಮಾಡುತ್ತಿದ್ದು, ಅವು ಬಾಕ್ಸ್ ಆಫೀಸ್ನಲ್ಲಿ ಫೇಲ್ ಆಗುತ್ತಿವೆ.
90ರ ದಶಕದಲ್ಲಿ ವರುಣ್ ಧವನ್ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ವಾಶು ಭಗ್ನಾನಿ ಇದೀಗ ಡೇವಿಡ್ ಧವನ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅಪ್ಪ ಮಗ (ವರುಣ್-ಡೇವಿಡ್) ಅನ್ನು ನಂಬಿ ಕೆಟ್ಟೆ ಎಂದಿದ್ದಾರೆ. ‘ಕೂಲಿ ನಂಬರ್ 1’ ಸಿನಿಮಾ ಮಾಡಲು ತಾವು ಡೇವಿಡ್ ಧವನ್ಗೆ 70 ಕೋಟಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲದೆ ಆ ಸಿನಿಮಾದಿಂದ ತಾವು 27 ಕೋಟಿ ರೂಪಾಯಿ ಹಣ ಕಳೆದುಕೊಂಡಿದ್ದಾಗಿಯೂ ಹೇಳಿದ್ದಾರೆ ನಿರ್ಮಾಪಕ.
ಇದನ್ನೂ ಓದಿ:ಸೆಲೆಬ್ರಿಟಿಗಳ ಅಹಂಕಾರಕ್ಕೆ ತೆರೆ ಹಾಕಲು ನಿರ್ಧರಿಸಿದ ಬಾಲಿವುಡ್ನ ಖ್ಯಾತ ಹೇರ್ಸ್ಟೈಲಿಸ್ಟ್
ಕೂಲಿ ಸಿನಿಮಾದ ಫ್ಲಾಪ್ ಬಳಿಕ ವಾಶು ಭಗ್ನಾನಿ ಬಳಿ ಮಾತನಾಡಿದ್ದ ಡೇವಿಡ್ ಧವನ್, ‘ಮನಿಮಗೆ ಆಗಿರುವ ನಷ್ಟವನ್ನು ಮುಂದೊಂದು ದಿನ ಸರಿದೂಗಿಸಿ ಕೊಡುತ್ತೇನೆ ಎಂದಿದ್ದರು. ‘ನಾವು ಬೀವಿ ನಂಬರ್ 1 ಸಿನಿಮಾವನ್ನು ಮತ್ತೆ ಮಾಡೋಣ ಎಂದಿದ್ದರಂತೆ. ಸರಿ ಎಂದಿದ್ದ ಭಗ್ನಾನಿ, ಚಿತ್ರಕತೆಗೆ ಕಾಯುತ್ತಿದ್ದರಂತೆ. ಆದರೆ ಡೇವಿಡ್ ಧವನ್ ಅಷ್ಟರಲ್ಲಿ ಟಿಪ್ಸ್ ಜೊತೆ ಸೇರಿಕೊಂಡು ಹೊಸ ಸಿನಿಮಾ ಮಾಡಿದ್ದು ಮಾತ್ರವಲ್ಲದೆ ತಮ್ಮ ಸಿನಿಮಾ ಆಗಿದ್ದ ‘ಬೀವಿ ನಂಬರ್ 1’ ಹಾಡನ್ನು ಆ ಸಿನಿಮಾನಲ್ಲಿ ಬಳಸಿದ್ದಾರೆ, ಅದಕ್ಕೆ ನನ್ನ ಅನುಮತಿಯನ್ನೂ ಸಹ ಪಡೆದಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.
ವರುಣ್ ಧವನ್ ನಟನೆಯ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದು, ಆ ಸಿನಿಮಾನಲ್ಲಿ ‘ಚುನರಿ ಚುನರಿ’ ಹೆಸರಿನ ಹಾಡನ್ನು ಬಳಸಿಕೊಂಡಿದ್ದಾರೆ. ಇದೀಗ ಭಗ್ನಾನಿ ಅವರು ಸಿನಿಮಾ ವಿರುದ್ಧ ದೂರು ದಾಖಲಿಸಿದ್ದಾರೆ. ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾನಲ್ಲಿ ವರುಣ್ ಧವನ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Tue, 26 May 26