ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್ (Rakhi Sawanth) ತಮ್ಮ ಇದೇ ಚಾಳಿಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಖಿ ತಮ್ಮ ಪತಿ ಮೈಸೂರಿನ ಆದಿಲ್ ದುರಾನಿ ವಿರುದ್ಧ ದೌರ್ಜನ್ಯ, ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ರಾಖಿ ಮಾಡಿದ ಆರೋಪಗಳಿಂದಾಗಿ ಆದಿಲ್ ದುರಾನಿ ಜೈಲು ವಾಸವನ್ನೂ ಅನುಭವಿಸಿದ್ದರು. ಇದೀಗ ಆದಿಲ್ ದುರಾನಿ, ರಾಖಿ ಸಾವಂತ್ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದು, ಪ್ರಕರಣ ಸಂಬಂಧ ತಮ್ಮನ್ನು ಬಂಧನಕ್ಕೆ ಒಳಪಡಿಸದಂತೆ ರಾಖಿ ಸಾವಂತ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದ್ದು, ರಾಖಿ ಸಾವಂತ್ಗೆ ಬಂಧನ ಭೀತಿ ಎದುರಾಗಿದೆ.
ಆದಿಲ್ ದುರಾನಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ರಾಖಿ ಸಾವಂತ್, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡಿದ್ದರು. ಒಂದು ಚಾನೆಲ್ ಜೊತೆ ಮಾತನಾಡುತ್ತಿರುವಾಗ ತಮ್ಮ ಹಾಗೂ ಆದಿಲ್ನ ಖಾಸಗಿ ಚಿತ್ರಗಳು, ವಿಡಿಯೋಗಳನ್ನು ಕ್ಯಾಮೆರಾಕ್ಕೆ ರಾಖಿ ಸಾವಂತ್ ತೋರಿಸಿದ್ದರು. ಅಲ್ಲದೆ ತಮ್ಮ ಹಾಗೂ ಆದಿಲ್ರ ಖಾಸಗಿ ವಿಡಿಯೋಗಳನ್ನು ಕೆಲವು ವಾಟ್ಸ್ಆಫ್ ಗ್ರೂಪ್ಗಳಲ್ಲಿ ಸಹ ಶೇರ್ ಮಾಡಿದ್ದರು.
ಇದನ್ನೂ ಓದಿ:ರಾಖಿ ಸಾವಂತ್-ಆದಿಲ್ ಖಾನ್ಗೆ ನಿಖಾ ಮಾಡಿಸಿದ್ದು ನಕಲಿ ಮೌಲಾನಾ?
ಬಳಿಕ ಆದಿಲ್ ದುರಾನಿ, ತಮ್ಮ ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಲೀಕ್ ಮಾಡಿರುವ ರಾಖಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಖಿ ಸಾವಂತ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಆರೋಪಿ ರಾಖಿ ಸಾವಂತ್ ಅವರಿಂದ ಕಳಿಸಲ್ಪಟ್ಟಿರುವ ಅಥವಾ ಪ್ರಕಟಿಸಲಾಗಿರುವ ವಿಡಿಯೋಗಳು ಕೇವಲ ಅಶ್ಲೀಲವಲ್ಲ ಆದರೆ ಲೈಂಗಿಕವಾಗಿ ದೌರ್ಜನ್ಯವೂ ಆಗಿದೆ. ಘಟನೆಯ ಸತ್ಯಗಳು, ಆರೋಪಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ, ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ತಿಳಿಸಿ ಅರ್ಜಿಯನ್ನು ರದ್ದು ಮಾಡಿದೆ.
ಮೈಸೂರಿನ ಉದ್ಯಮಿ ಆದಿಲ್ ದುರಾನಿ ಹಾಗೂ ರಾಖಿ ಸಾವಂತ್ 2021ರಲ್ಲಿ ವಿವಾಹವಾಗಿದ್ದರು. ವಿವಾಹವಾದಾಗ ಇಬ್ಬರೂ ಆರಾಮವಾಗಿಯೇ ಇದ್ದರು. ಆದರೆ ಬಳಿಕ ರಾಖಿ ಸಾವಂತ್, ತಮ್ಮ ಪತಿ ಆದಿಲ್ ಬಗ್ಗೆ ಹಲವು ಆರೋಪಗಳನ್ನು ಮಾಡಲು ಆರಂಭಿಸಿದರು. ಲೈಂಗಿಕ ದೌರ್ಜನ್ಯ, ಮೋಸ, ಹಣ ವಂಚನೆ, ಹಿಂಸೆ ಇನ್ನೂ ಕೆಲವು ಆರೋಪಗಳನ್ನು ರಾಖಿ ಮಾಡಿದ್ದರು. ಮೈಸೂರಿನ ಆದಿಲ್ ನಿವಾಸದ ಮುಂದೆ ಪ್ರತಿಭಟನೆಯನ್ನು ಸಹ ರಾಖಿ ಸಾವಂತ್ ಮಾಡಿದ್ದರು. ರಾಖಿ ಸಾವಂತ್ ನೀಡಿದ್ದ ದೂರಿನ ಆಧಾರದಲ್ಲಿ ಆದಿಲ್ ಜೈಲು ವಾಸವನ್ನೂ ಅನುಭವಿಸಬೇಕಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ