ರಣವೀರ್ ಸಿಂಗ್ ಬ್ಯಾನ್ ಮಾಡಿದ್ದಕ್ಕೆ ಗರಂ ಆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಖ್ಯಾತ ನಟ ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಿದ್ದರ ವಿರುದ್ಧ ಅನೇಕರು ಧ್ವನಿ ಎತ್ತಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಈ ಬಗ್ಗೆ ತಮ್ಮ ನಿಲುವು ತಿಳಿಸಿದ್ದಾರೆ. ಬ್ಯಾನ್ ಮಾಡಿದರೂ ಕೂಡ ರಣವೀರ್ ಸಿಂಗ್​​ಗೆ ಇರುವ ಬೇಡಿಕೆ ಕಡಿಮೆ ಆಗಲ್ಲ ಎಂದು ಆರ್​ಜಿವಿ ಹೇಳಿದ್ದಾರೆ.

ರಣವೀರ್ ಸಿಂಗ್ ಬ್ಯಾನ್ ಮಾಡಿದ್ದಕ್ಕೆ ಗರಂ ಆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Ram Gopal Varma, Ranveer Singh
Image Credit source: PTI

Updated on: May 31, 2026 | 10:30 AM

‘ಡಾನ್ 3′ (Don 3) ಚಿತ್ರದಿಂದ ನಟ ರಣವೀರ್ ಸಿಂಗ್ (Ranveer Singh) ಹೊರಬಂದ ವಿಚಾರ ಈಗ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ನೌಕರರ ಒಕ್ಕೂಟವು (FWICE) ನಟ ರಣವೀರ್ ಸಿಂಗ್ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ. ಈ ನಡೆಯನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ತೀವ್ರವಾಗಿ ಖಂಡಿಸಿದ್ದು, ರಣವೀರ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಆರ್‌ಜಿವಿ, ಫೆಡರೇಶನ್‌ನ ಹಸ್ತಕ್ಷೇಪವನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ‘ರಣವೀರ್ ಸಿಂಗ್ ಬದಲಿಗೆ FWICE ಒಕ್ಕೂಟವನ್ನೇ ಬ್ಯಾನ್ ಮಾಡಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಡಾನ್ 3’ ವಿವಾದ: ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್ಟೈನ್‌ಮೆಂಟ್’ ನಿರ್ಮಾಣದ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ನಟನ ಈ ಹಠಾತ್ ನಿರ್ಧಾರದಿಂದಾಗಿ ಪ್ರಿ-ಪ್ರೊಡಕ್ಷನ್ ಕೆಲಸ, ಲೊಕೇಶನ್ ಹುಡುಕಾಟ ಸೇರಿದಂತೆ ಸಿನಿಮಾ ಸಿದ್ಧತೆಗಾಗಿ ಖರ್ಚಾಗಿದ್ದ ಬರೋಬ್ಬರಿ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿರ್ಮಾಣ ಸಂಸ್ಥೆ ಆರೋಪಿಸಿದೆ.

ಈ ಭಿನ್ನಾಭಿಪ್ರಾಯದ ಬಳಿಕ FWICE ಒಕ್ಕೂಟವು ರಣವೀರ್ ಸಿಂಗ್‌ಗೆ ತನ್ನ ವಾದ ಮಂಡಿಸುವಂತೆ ಹಲವು ನೋಟಿಸ್‌ಗಳನ್ನು ನೀಡಿತ್ತು. ಆದರೆ, ರಣವೀರ್ ಅವರ ಕಾನೂನು ತಂಡವು ‘ಇದು ಖಾಸಗಿ ವಾಣಿಜ್ಯ ಒಪ್ಪಂದವಾಗಿದ್ದು, ಇದರ ಮೇಲೆ ಹಸ್ತಕ್ಷೇಪ ಮಾಡಲು ಒಕ್ಕೂಟಕ್ಕೆ ಯಾವುದೇ ಅಧಿಕಾರ ಇಲ್ಲ’ ಎಂದು ಪ್ರಶ್ನಿಸಿತ್ತು. ಇದರಿಂದ ಕೆರಳಿದ ಒಕ್ಕೂಟವು, ರಣವೀರ್ ವಿರುದ್ಧ ಅಸಹಕಾರ ತೋರಲು ಕರೆ ನೀಡಿ, ಚಿತ್ರರಂಗದ ಯಾವುದೇ ಸಿಬ್ಬಂದಿ ಅವರಿಗೆ ಸಹಕರಿಸದಂತೆ ಸೂಚನೆ ನೀಡಿದೆ.

ಒಕ್ಕೂಟದ ಈ ನಡೆಯನ್ನು ಟೀಕಿಸಿರುವ ರಾಮ್ ಗೋಪಾಲ್ ವರ್ಮಾ, ಇದು ಇಡೀ ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯವಲ್ಲ, ಕೇವಲ ಇಬ್ಬರ ನಡುವಿನ ಒಪ್ಪಂದದ ಸಮಸ್ಯೆ ಎಂದಿದ್ದಾರೆ. ‘ಇಲ್ಲಿ ನಿರ್ಮಾಪಕರು ತಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಇಬ್ಬರ ನಡುವಿನ ಖಾಸಗಿ ಒಪ್ಪಂದದ ವಿವಾದ. ಭಾರತದಲ್ಲಿ ಪ್ರತಿದಿನ ಎಲ್ಲಾ ಉದ್ಯಮಗಳಲ್ಲೂ ಇಂತಹ ಲಕ್ಷಾಂತರ ಪ್ರಕರಣಗಳು ನಡೆಯುತ್ತಿರುತ್ತವೆ. FWICE ಒಕ್ಕೂಟವು ಯಾವುದೇ ನ್ಯಾಯಾಲಯವಾಗಲಿ ಅಥವಾ ಸರ್ಕಾರದ ಅನುಮತಿ ಪಡೆದ ಸಂಸ್ಥೆಯಲ್ಲ’ ಎಂದು ವರ್ಮಾ ಬರೆದುಕೊಂಡಿದ್ದಾರೆ.

‘ಅಲ್ಲಿ ಏನಾಯಿತು ಎಂಬ ಸೂಕ್ಷ್ಮ ವಿಷಯಗಳು ಕೇವಲ ವಿವಾದದಲ್ಲಿರುವ ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ಆದ್ದರಿಂದ ಇದನ್ನು ಇತರ ಸಿವಿಲ್ ಪ್ರಕರಣಗಳಂತೆ ಅವರ ನಡುವೆಯೇ ಬಿಡಬೇಕು. ಒಂದು ವೇಳೆ ನ್ಯಾಯಾಲಯಕ್ಕೆ ಹೋದರೆ ನ್ಯಾಯಾಧೀಶರು ತೀರ್ಮಾನಿಸುತ್ತಾರೆ. ಅದನ್ನು ಬಿಟ್ಟು ಅನಗತ್ಯವಾಗಿ ಮೂಗು ತೂರಿಸಬಾರದು’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ರಣವೀರ್ ಸಿಂಗ್ ಅವರ ಸ್ಟಾರ್‌ಡಮ್ ಬಗ್ಗೆಯೂ ಮಾತನಾಡಿರುವ ಆರ್‌ಜಿವಿ, ‘ಒಂದು ವೇಳೆ ರಣವೀರ್ ಸಿಂಗ್ ಇಂದು ಒಂದು ಸಿನಿಮಾಗೆ ಒಪ್ಪಿಗೆ ನೀಡಿದರೆ ಸಾಕು, ನಾಳೆ ಬೆಳಗ್ಗೆ ಅವರ ಮನೆಯ ಮುಂದೆ ಚೆಕ್ ಬುಕ್ ಹಿಡಿದು ಸಾಲಾಗಿ ನಿಲ್ಲುವ ನಿರ್ಮಾಪಕರ ಸಾಲು ಒಂದು ಕಿಲೋಮೀಟರ್ ಉದ್ದ ಇರುತ್ತದೆ ಎಂಬುದು ವಿವಾದ ಮಾಡುತ್ತಿರುವ ಎಲ್ಲರಿಗೂ ಗೊತ್ತು’ ಎಂದು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us