ತೆರೆ ಮೇಲೆ ಮತ್ತೆ ಒಂದಾಗುತ್ತಿರುವ ಆಲಿಯಾ-ರಣ್ಬೀರ್, ವಿಕ್ಕಿ ವಿಲನ್?
Ranbir-Alia: ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದಂಪತಿ ರಣ್ಬೀರ್ ಕಪೂರ್-ಆಲಿಯಾ ಭಟ್ ಇದೀಗ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದಾರೆ.
ಆಲಿಯಾ ಭಟ್ (Alia Bhatt) ಹಾಗೂ ರಣ್ಬೀರ್ ಕಪೂರ್ (Ranbir Kapoor) ಜೋಡಿ ಒಟ್ಟಿಗೆ ನಟಿಸಿದ್ದ ‘ಬ್ರಹ್ಮಾಸ್ತ್ರ’ ಸಿನಿಮಾ 2022ರ ಅಂತ್ಯದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಹಿಟ್ಗಳ ಕೊರತೆ ಎದುರಿಸುತ್ತಿದ್ದ ಬಾಲಿವುಡ್ಗೆ ನಿರಾಳತೆ ತಂದಿತ್ತು. ಇದೀಗ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಮತ್ತೆ ತೆರೆ ಮೇಲೆ ಒಟ್ಟಿಗೆ ನಟಿಸಲಿದ್ದಾರೆ. ಜೊತೆಗೆ ಕತ್ರಿನಾ ಕೈಫ್ರ ಪತಿ ವಿಕ್ಕಿ ಕೌಶಲ್ ಸಹ ಜೊತೆಗಿದ್ದಾರೆ. ಸಿನಿಮಾ ನಿರ್ದೇಶಿಸುತ್ತಿರುವುದು ಬಾಲಿವುಡ್ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ.
ಆಲಿಯಾ ಭಟ್ಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾವನ್ನು ನಿರ್ದೇಶಿಸಿದ್ದ ಸಂಜಯ್ ಲೀಲಾ ಬನ್ಸಾಲಿ, ಇದೀಗ ತಮ್ಮ ಹೊಸ ಸಿನಿಮಾದಲ್ಲಿ ಮತ್ತೆ ಆಲಿಯಾ ಭಟ್ಗೆ ಅವಕಾಶ ನೀಡಿದ್ದಾರೆ. ಜೊತೆಗೆ ರಣ್ಬೀರ್ ಕಪೂರ್ ಹಾಗೂ ವಿಕ್ಕಿ ಕೌಶಲ್ ಸಹ ಇದ್ದಾರೆ. ಆದರೆ ಈ ಸಿನಿಮಾ ಸಂಜಯ್ರ ಮಾಮೂಲಿ ಸ್ಟೈಲ್ನಲ್ಲಿ ಅಲ್ಲದೆ ಹೊಸ ತಲೆಮಾರಿನ ಕತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಹೆರಿಗೆ ಬಳಿಕ ಆಲಿಯಾ ಭಟ್ ತೂಕ ಇಳಿಸಿದ್ದು ಹೇಗೆ?
ಆಲಿಯಾ, ರಣ್ಬೀರ್ ಹಾಗೂ ವಿಕ್ಕಿ ಕೌಶಲ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾಕ್ಕೆ ‘ಲವ್ ಆಂಡ್ ವಾರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾವು ತ್ರಿಕೋನ ಪ್ರೇಮಕತೆಯನ್ನು ಒಳಗೊಂಡಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂಜಯ್ ಲೀಲಾ ಬನ್ಸಾಲಿ, ಐತಿಹಾಸಿಕ ಅಥವಾ ರೆಟ್ರೋ ಮಾದರಿಯ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ‘ಲವ್ ಆಂಡ್ ವಾರ್’ ಸಿನಿಮಾ ಹೊಸ ತಲೆಮಾರಿನ ಕತೆಯನ್ನು ಒಳಗೊಂಡಿರಲಿದೆ. ಅಲ್ಲದೆ, ಸಂಜಯ್ ಲೀಲಾ ಬನ್ಸಾಲಿಯವರ ಸಿನಿಮಾಗಳಲ್ಲಿ ಹೆಚ್ಚು ಪ್ರಧಾನ್ಯತೆ ಇರದಿದ್ದ ಆಕ್ಷನ್ಗೆ ಈ ಸಿನಿಮಾದಲ್ಲಿ ಪ್ರಾಧಾನ್ಯತೆ ನೀಡಲಾಗಿದೆಯಂತೆ.
ಟಾಲಿವುಡ್ ನಟ ಅಲ್ಲು ಅರ್ಜುನ್, ಸಂಜಯ್ ಲೀಲಾ ಬನ್ಸಾಲಿಯವರ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅಲ್ಲು ಅರ್ಜುನ್ ಸಹ ಕೆಲವು ಬಾರಿ ಮುಂಬೈನ ಸಂಜಯ್ ಲೀಲಾ ಬನ್ಸಾಲಿಯವರ ಕಚೇರಿ ಎದುರು ಕಾಣಿಸಿಕೊಂಡಿದ್ದರು. ಇದೇ ಸಿನಿಮಾದ ಬಗ್ಗೆ ಸಂಜಯ್, ಅಲ್ಲು ಅರ್ಜುನ್ ಜೊತೆ ಚರ್ಚಿಸಿದ್ದರು ಎನ್ನಲಾಗಿದ್ದು, ಆ ಅವಕಾಶ ಈಗ ವಿಕ್ಕಿ ಕೌಶಲ್ಗೆ ದೊರೆತಿದೆ. ‘ಲವ್ ಆಂಡ್ ವಾರ್’ ಸಿನಿಮಾವನ್ನು ಬನ್ಸಾಲಿ ಪ್ರೊಡಕ್ಷನ್ ಮೂಲಕವೇ ನಿರ್ಮಾಣ ಮಾಡಲಾಗುತ್ತಿದ್ದು, ಸಿನಿಮಾ 2025ರ ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ