ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಮಾಡಿದ ಸಾಧನೆ ದೊಡ್ಡದು. ವಿಶ್ವ ಮಾರುಕಟ್ಟೆಯಲ್ಲಿ ಈ ಸಿನಿಮಾ ಸಾವಿರಾರು ರೂಪಾಯಿ ಗಳಿಸಿದೆ. ಇದರಿಂದ ಶಾರುಖ್ ಖಾನ್ (Shah Rukh Khan) ಅವರು ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಬಾಲಿವುಡ್ನಲ್ಲಿ ಅವರ ಹವಾ ಹೆಚ್ಚಿದೆ. ಆದರೆ ಈಗೊಂದು ಅಚ್ಚರಿ ಸುದ್ದಿ ಕೇಳಿಬಂದಿದೆ. ‘ಪಠಾಣ್’ ಸಿನಿಮಾವನ್ನೂ ಮೀರಿಸುವ ರೀತಿಯಲ್ಲಿ ರಾಣಿ ಮುಖರ್ಜಿ (Rani Mukherjee) ಅವರ ಹೊಸ ಸಿನಿಮಾ ಅಬ್ಬರಿಸಿದೆ. ಆದರೆ ಅದು ಭಾರತದಲ್ಲಿ ಅಲ್ಲ. ಬದಲಿಗೆ, ನಾರ್ವೆಯಲ್ಲಿ ಎಂಬುದು ವಿಶೇಷ. ಹೌದು, ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ (Mrs Chatterjee Vs Norway) ಸಿನಿಮಾ ನಾರ್ವೇಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದೆ. ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್ನಲ್ಲಿ ಅತಿ ಕಲೆಕ್ಷನ್ ಮಾಡಿದ ಖ್ಯಾತಿ ಈ ಸಿನಿಮಾಗೆ ಸಲ್ಲುತ್ತದೆ. ಈ ಕುರಿತು ಚಿತ್ರತಂಡದವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಕ್ರಿಪ್ಟ್ ಆಯ್ಕೆಯಲ್ಲಿ ರಾಣಿ ಮುಖರ್ಜಿ ಅವರು ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ತಮ್ಮ ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನಷ್ಟೇ ಅವರು ಮಾಡುತ್ತಿದ್ದಾರೆ. ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾದಲ್ಲಿ ಅವರು ಎರಡು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ. ನಾರ್ವೇಯಲ್ಲಿ ಮಕ್ಕಳನ್ನು ಕಳೆದುಕೊಂಡು ಕಷ್ಟಪಡುವ ಭಾರತೀಯ ಮಹಿಳೆಯಾಗಿ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಣಿ ಮುಖರ್ಜಿ ಅಜ್ಜಿ ಆರತಿ ರಾಯ್ ನಿಧನ; ಸಂತಾಪ ಸೂಚಿಸಿದ ಬೆಂಗಾಲಿ ಚಿತ್ರರಂಗ
ನೈಜ ಘಟನೆಗಳನ್ನು ಆಧರಿಸಿ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾ ತಯಾರಾಗಿದೆ. ಇದು ನಾರ್ವೇ ಸರ್ಕಾರ ಮತ್ತು ಅಲ್ಲಿನ ಪ್ರಜೆಗಳಿಗೂ ಸಂಬಂಧಿಸಿದ ಕತೆ ಆದ್ದರಿಂದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಪರಿಣಾಮವಾಗಿ ನಾರ್ವೇ ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಚಿತ್ರಕ್ಕಿಂತಲೂ ಹೆಚ್ಚಿನ ಗಳಿಕೆಯನ್ನು ಈ ಸಿನಿಮಾ ಮಾಡಿದೆ.
ಇದನ್ನೂ ಓದಿ: ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ
ನಾರ್ವೆಯ ಚಿತ್ರಮಂದಿರಗಳಲ್ಲಿ ಮೊದಲ ಮೂರು ದಿನ ಉತ್ತಮ ಪ್ರದರ್ಶನ ಕಂಡಿರುವ ಈ ಸಿನಿಮಾ ಅಂದಾಜು 58 ಲಕ್ಷ ರೂಪಾಯಿ ಕಮಾಯಿ ಮಾಡಿದೆ. ಈ ಹಿಂದೆ ‘ಪಠಾಣ್’, ‘ರಯೀಸ್’, ‘ಸುಲ್ತಾನ್’ ಸಿನಿಮಾಗಳು ನಾರ್ವೆಯಲ್ಲಿ ಅಬ್ಬರಿಸಿದ್ದವು. ಆ ಸಿನಿಮಾಗಳನ್ನೂ ಮೀರಿಸಿ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾ ದಾಖಲೆ ಬರೆದಿದೆ.
ಈ ಸಿನಿಮಾದಿಂದಾಗಿ ರಾಣಿ ಮುಖರ್ಜಿ ಅವರಿಗೆ ಗೆಲುವು ಸಿಕ್ಕಂತಾಗಿದೆ. ಅವರ ಅಭಿಮಾನಿಗಳು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ನಾರ್ವೇ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನಿರ್ಬನ್ ಭಟ್ಟಾಚಾರ್ಯ, ಜಿಮ್ ಸರ್ಬ್ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಶಿಮಾ ಚಿಬ್ಬರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:43 pm, Wed, 22 March 23