ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಂದ ಗೆಲುವು ಸಿಕ್ಕಿಲ್ಲ. ಆದರೆ ಅವರು ಅತಿ ಹೆಚ್ಚು ಸುದ್ದಿ ಆಗಿದ್ದು ಬೆತ್ತಲೆ ಫೋಟೋದ ಕಾರಣದಿಂದ. ಪ್ರತಿಷ್ಠಿತ ‘ಪೇಪರ್’ ಮ್ಯಾಗಜಿನ್ ಸಲುವಾಗಿ ಅವರು ಸಂಪೂರ್ಣ ನಗ್ನವಾಗಿ ಪೋಸ್ ನೀಡಿದರು. ಅವರ ಬೆತ್ತಲೆ ಫೋಟೋಗಳು (Ranveer Singh Viral Photo) ಸಿಕ್ಕಾಪಟ್ಟೆ ವೈರಲ್ ಆದವು. ಈಗಲೂ ಅದರ ಬಗ್ಗೆ ಚರ್ಚೆ ನಿಂತಿಲ್ಲ. ಅನೇಕರಿಂದ ಈ ಫೋಟೋಶೂಟ್ಗೆ (Ranveer Singh Photoshoot) ವಿರೋಧ ವ್ಯಕ್ತವಾಗಿದೆ. ಆ ಕುರಿತ ಚರ್ಚೆ ಅಂತ್ಯವಾಗುವುದಕ್ಕೂ ಮುನ್ನವೇ ಮತ್ತೆ ರಣವೀರ್ ಸಿಂಗ್ ಅವರಿಗೆ ನಗ್ನವಾಗಿ ಪೋಸ್ ನೀಡುವಂತೆ ಆಹ್ವಾನ ಬಂದಿದೆ. ಆದರೆ ಈ ಬಾರಿ ಅವರಿಗೆ ಬೇಡಿಕೆ ಬಂದಿರುವುದು ಪ್ರಾಣಿಗಳ ಹಿತಕ್ಕೋಸ್ಕರ ಎಂಬುದು ವಿಶೇಷ. ಈ ಮನವಿಯನ್ನು ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ನಿರ್ಮಾಣ ಆಗಿದೆ.
ಪ್ರಾಣಿಗಳ ವಿರುದ್ಧದ ಹಿಂಸೆಯನ್ನು ತಡೆಗಟ್ಟಲು ಮತ್ತು ಸಸ್ಯಾಹಾರವನ್ನು ಉತ್ತೇಜಿಸಲು ‘ಪೆಟಾ’ (People for the Ethical Treatment of Animals) ಪ್ರಾಣಿ ದಯಾ ಸಂಘ ಕಾರ್ಯನಿರತವಾಗಿದೆ. ಇದು ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಒಂದು ಭಾಗವಾಗಿ ವಿಶೇಷ ಫೋಟೋಶೂಟ್ಗಳನ್ನೂ ಮಾಡಿಸಲಾಗುತ್ತದೆ. ಈ ಹಿಂದೆ ಕೆಲವು ಸೆಲೆಬ್ರಿಟಿಗಳು ಇದರ ಅಭಿಯಾನದಲ್ಲಿ ಭಾಗಿ ಆಗಿದ್ದುಂಟು. ಈಗ ರಣವೀರ್ ಸಿಂಗ್ ಅವರಿಗೆ ಆಹ್ವಾನ ಬಂದಿದೆ.
‘ಪೆಟಾ’ ಸಂಸ್ಥೆಯಿಂದ ರಣವೀರ್ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ. ‘ಪ್ರಾಣಿಗಳಿಗೂ ಕೂಡ ನಮ್ಮ ರೀತಿಯೇ ದೇಹದ ಅಂಗಗಳು ಇವೆ’ ಎಂಬ ಜಾಗೃತಿ ವಾಕ್ಯದೊಂದಿಗೆ ಒಂದು ಅಭಿಯಾನ ಮಾಡಲಾಗುತ್ತಿದೆ. ಅದಕ್ಕಾಗಿ ಸೆಲೆಬ್ರಿಟಿಗಳಿಂದ ಫೋಟೋಶೂಟ್ ಮಾಡಿಸಲಾಗುತ್ತಿದೆ. ಇದರಲ್ಲಿ ರಣವೀರ್ ಸಿಂಗ್ ಅವರು ಬೆತ್ತಲಾಗಿ ಪೋಸ್ ನೀಡಲಿ ಎಂಬ ವಿನಂತಿಸಿಕೊಳ್ಳಲಾಗಿದೆ. ಸಸ್ಯಾಹಾರವನ್ನು ಉತ್ತೇಚಿಸಲು ರಣವೀರ್ ಸಿಂಗ್ ಸೂಕ್ತ ವ್ಯಕ್ತಿ ಎಂದು ‘ಪೆಟಾ’ ಅಭಿಪ್ರಾಯಪಟ್ಟಿದೆ.
‘ಪೆಟಾ’ ಜೊತೆ ಅನೇಕ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಮೊದಲು ಮಾಂಸಾಹಾರಿ ಆಗಿದ್ದು, ನಂತರ ಸಸ್ಯಾಹಾರವನ್ನು ರೂಢಿಸಿಕೊಂಡವರು ಅನೇಕರಿದ್ದಾರೆ. ಈ ಹಿಂದೆ ಬಿಗ್ ಬಾಸ್ ಸ್ಪರ್ಧಿ ಪಮೇಲಾ ಆ್ಯಂಡರ್ಸನ್ ಅವರು ‘ಪೆಟಾ’ ಸಲುವಾಗಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದರು. ಈಗ ರಣವೀರ್ ಸಿಂಗ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ರಣವೀರ್ ಸಿಂಗ್ ನಟನೆ ‘83’ ಸಿನಿಮಾ 2021ರ ಡಿಸೆಂಬರ್ನಲ್ಲಿ ತೆರೆಕಂಡಿತು. ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವಲ್ಲಿ ಈ ಚಿತ್ರ ವಿಫಲವಾಯಿತು. 2022ರ ವರ್ಷ ಕೂಡ ಅವರಿಗೆ ತೃಪ್ತಿದಾಯವಾಗಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ಜಯೇಶ್ಭಾಯ್ ಜೋರ್ದಾರ್’ ಚಿತ್ರ ಕೂಡ ಸೋತಿದೆ.