‘ಧುರಂಧರ್ 2’ ಮೊದಲ ವಿಮರ್ಶೆ: ಹಾಲಿವುಡ್ ನಿರ್ದೇಶಕರು ನೋಡಬೇಕು ಎಂದ ಆರ್​ಜಿವಿ

‘ಧುರಂಧರ್ 2’ ಸಿನಿಮಾ ಹೇಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೊದಲ ವಿಮರ್ಶೆ ಹೊರಬಿದ್ದಿದೆ. ರಾಮ್ ಗೋಪಾಲ್ ವರ್ಮಾ ಅವರು ವಿಶೇಷ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಿಸಿ ವಿಮರ್ಶೆ ತಿಳಿಸಿದ್ದಾರೆ. ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೊಗಳಿದ್ದಾರೆ.

‘ಧುರಂಧರ್ 2’ ಮೊದಲ ವಿಮರ್ಶೆ: ಹಾಲಿವುಡ್ ನಿರ್ದೇಶಕರು ನೋಡಬೇಕು ಎಂದ ಆರ್​ಜಿವಿ
Ranveer Singh

Updated on: Mar 18, 2026 | 1:41 PM

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರವನ್ನು ನೋಡಿ ದಂಗಾಗಿದ್ದಾರೆ. ಈ ಚಿತ್ರದ ದೃಶ್ಯ ವೈಭವ ಮತ್ತು ಪ್ರಭಾವಕ್ಕೆ ಮನಸೋತಿರುವ ಅವರು, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಹೊಸ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಚಿತ್ರದ ಪ್ರಿವ್ಯೂ ನೋಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು, ‘ಧುರಂಧರ್ 2 ಚಿತ್ರದ ಪ್ರಭಾವವು ಶೋಲೆ ಚಿತ್ರಕ್ಕಿಂತ 100 ಪಟ್ಟು ಹೆಚ್ಚಿದೆ. ಈ ಸಿನಿಮಾ ಮುಂದೆ ಮೊಘಲ್-ಎ-ಆಜಮ್ ರೀತಿಯ ಶ್ರೇಷ್ಠ ಚಿತ್ರಗಳು ಕೂಡ ಟಿವಿ ಸೀರಿಯಲ್‌ಗಳಂತೆ ಕಾಣುತ್ತವೆ. ಇದು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲಿದೆ’ ಎಂದು ಹೊಗಳಿದ್ದಾರೆ.

ಇಷ್ಟಕ್ಕೇ ನಿಲ್ಲದ ರಾಮ್ ಗೋಪಾಲ್ ವರ್ಮಾ ಅವರು, ಹಾಲಿವುಡ್‌ನ ದಿಗ್ಗಜ ನಿರ್ದೇಶಕರಾದ ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಕ್ರಿಸ್ಟೋಫರ್ ನೋಲನ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ‘ಸ್ಪೀಲ್ಬರ್ಗ್ ಮತ್ತು ನೋಲನ್ ಅವರು ಮಾಡುತ್ತಿರುವ ಕೆಲಸವನ್ನೆಲ್ಲಾ ಬಿಟ್ಟು, ಮೊದಲ ದಿನವೇ ಧುರಂಧರ್ 2 ಚಿತ್ರವನ್ನು ನೋಡಬೇಕು. ನಿರ್ದೇಶಕ ಎಂಬ ಪದದ ಅರ್ಥವೇ ಇನ್ನು ಮುಂದೆ ಆದಿತ್ಯ ಧಾರ್ ಹೆಸರಿನಿಂದ ಶುರುವಾಗುತ್ತದೆ’ ಎಂದು ಆರ್​ಜಿವಿ ಬರೆದುಕೊಂಡಿದ್ದಾರೆ.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಮೊದಲ ಭಾಗವು ಜಾಗತಿಕವಾಗಿ 1,300 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು. ಈಗ ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 18ರ ಸಂಜೆ 5.30ರಿಂದ ಪೇಯ್ಡ್ ಪ್ರಿವ್ಯೂಗಳನ್ನು ಆರಂಭಿಸಿದೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಮ್​ಪಾಲ್, ಆರ್. ಮಾಧವನ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಾರ್ಚ್ 19ರಿಂದ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ. ಚಿತ್ರದ ಕುರಿತಾದ ಈ ಮಟ್ಟದ ಕ್ರೇಜ್ ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಎಂದೂ ಕಂಡಿರಲಿಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ

ಆರಂಭದಿಂದಲೂ ‘ಧುರಂಧರ್’ ಚಿತ್ರತಂಡವನ್ನು ರಾಮ್ ಗೋಪಾಲ್ ವರ್ಮಾ ಅವರು ಹೊಗಳುತ್ತಲೇ ಬಂದಿದ್ದಾರೆ. ಈ ಮೊದಲು ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ್’ ಕಥೆಯನ್ನು ‘ಸತ್ಯ’ ಸಿನಿಮಾದಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಆದರೆ ಆ ರೀತಿ ಹೋಲಿಕೆಗಳು ಸಹಜ ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us