ಬಾಲಿವುಡ್ಗಿಂತ (Bollywood) ದಕ್ಷಿಣ ಭಾರತದ ಚಿತ್ರರಂಗ ಮೇಲು ಎಂಬ ಮಾತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ‘ಪುಷ್ಪ’, ‘ಆರ್ಆರ್ಆರ್’ ಹಾಗೂ ‘ಕೆಜಿಎಫ್ 2’ (KGF: Chapter 2) ಯಶಸ್ಸಿನ ನಂತರ ಈ ಚರ್ಚೆ ಜೋರಾಗಿದೆ. ಬಾಲಿವುಡ್ ಮಂದಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಕೆಲವರು ‘ಬಾಲಿವುಡ್ ಎಂದಿಗೂ ಗ್ರೇಟ್’ ಎಂದರೆ, ಇನ್ನೂ ಕೆಲವರು ‘ದಕ್ಷಿಣ ಭಾರತದ ಚಿತ್ರರಂಗವನ್ನು ನೋಡಿ ಕಲಿಯಬೇಕಿದೆ, ರಿಮೇಕ್ ಮಾಡುವುದನ್ನು ನಿಲ್ಲಿಸಬೇಕಿದೆ’ ಎಂದು ಹೇಳಿದ್ದಾರೆ. ಈಗ ರಣವೀರ್ ಸಿಂಗ್ (Ranaveer Singh) ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.
ರಣವೀರ್ ಸಿಂಗ್ ನಟನೆಯ ‘ಜಯೇಶ್ ಭಾಯ್ ಜೋರ್ದಾರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 13ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ‘83’ ನಂತರ ಬಿಡುಗಡೆ ಆಗುತ್ತಿರುವ ಅವರ ಮುಂದಿನ ಸಿನಿಮಾ ಇದಾಗಿದೆ. ಶಾಲಿನಿ ಪಾಂಡೆ ಅವರು ‘ಜಯೇಶ್ ಭಾಯ್ ಜೋರ್ದಾರ್’ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ. ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ರಣವೀರ್ ಸಿಂಗ್ ಭಾಗಿ ಆಗುತ್ತಿದ್ದಾರೆ. ಈ ವೇಳೆ ಅವರು ಬಾಲಿವುಡ್ vs ದಕ್ಷಿಣ ಭಾರತದ ಸಿನಿಮಾ ಎಂಬ ಚರ್ಚೆ ಕುರಿತು ಮಾತನಾಡಿದ್ದಾರೆ.
‘ನನಗೆ ತೆಲುಗು ಮಾತನಾಡಲು ಬರುವುದಿಲ್ಲ. ಆದರೂ ನಾನು ‘ಪುಷ್ಪ’, ‘ಆರ್ಆರ್ಆರ್’ ಸಿನಿಮಾ ನೋಡಿದ್ದೇನೆ. ಆ ಸಿನಿಮಾಗಳ ಬಗ್ಗೆ ನಿಜಕ್ಕೂ ವಿಸ್ಮಯಗೊಂಡೆ. ಸಿನಿಮಾ ಮೇಕಿಂಗ್ಅನ್ನು ನಾನು ಪ್ರಶಂಸಿಸುತ್ತೇನೆ. ಬೇರೆಬೇರೆ ವಲಯದ ಪ್ರೇಕ್ಷಕರು ಈ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವುಗಳೆಲ್ಲವೂ ನಮ್ಮ ಚಿತ್ರಗಳು. ಭಾರತೀಯ ಸಿನಿಮಾ ಅನ್ನೋದು ಒಂದೇ’ ಎಂದು ಹೇಳಿದ್ದಾರೆ ರಣವೀರ್.
‘ಕೆಜಿಎಫ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡಿದೆ. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ದಕ್ಷಿಣದ ಸಿನಿಮಾಗಳು ಬಾಲಿವುಡ್ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುತ್ತಿವೆ. ಈ ಬಗ್ಗೆ ರಣವೀರ್ ಸಿಂಗ್ ಮಾತನಾಡಿದ್ದಾರೆ. ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
‘ನಾನು ಒಬ್ಬ ಕಲಾವಿದ. ನಾನು ನಿರ್ಮಾಪಕ ಅಥವಾ ಬಿಸ್ನೆಸ್ಮ್ಯಾನ್ ಅಲ್ಲದ ಕಾರಣ ಸಿನಿಮಾ ವ್ಯವಹಾರದ ಬಗ್ಗೆ ನನಗೆ ಹೆಚ್ಚಿನ ಜ್ಞಾನವಿಲ್ಲ. ನಾನು ಹಣ ಪಡೆದು ನಟಿಸುತ್ತೇನೆ. ಕ್ಯಾಮೆರಾ ಮುಂದೆ ಬರುವುದಕ್ಕೆ ನಾನು ಹಣ ಪಡೆಯುತ್ತೇನೆ. ನನ್ನ ಜ್ಞಾನ ಅದಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ, ನನ್ನ ವೈಯಕ್ತಿಕ ದೃಷ್ಟಿಯಲ್ಲಿ ಹೇಳುವುದಾದರೆ, ಈ ಸಿನಿಮಾಗಳು (ಹಿಂದಿಗೆ ಡಬ್ ಆಗಿ ತೆರೆಕಂಡ ದಕ್ಷಿಣದ ಸಿನಿಮಾಗಳು) ನಿಜಕ್ಕೂ ಉತ್ತಮ ಸಿನಿಮಾಗಳು ಎಂದಷ್ಟೇ ಹೇಳಬಲ್ಲೆ’ ಎಂಬುದು ರಣವೀರ್ ಸಿಂಗ್ ಮಾತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:47 pm, Thu, 12 May 22