
ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮಾಜಿ ಗೆಳತಿ, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ತಾತ್ಕಾಲಿಕವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಡಿಜಿಟಲ್ ಲೋಕದಲ್ಲಿನ ನಿರಂತರವಾದ ಗದ್ದಲ ಮತ್ತು ಒತ್ತಡಗಳು ತಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ರಿಯಾ ಚಕ್ರವರ್ತಿ (Rhea Chakraborty) ಅವರು ತಿಳಿಸಿದ್ದಾರೆ. ತಮ್ಮ 3.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರಿಯಾ, ಆನ್‌ಲೈನ್ ಪ್ರಪಂಚದ ಒತ್ತಡದಿಂದ ಹೊರಬಂದು ನೈಜ ಜಗತ್ತಿನೊಂದಿಗೆ ಮರುಸಂಪರ್ಕ ಸಾಧಿಸಲು ಬಯಸಿದ್ದಾರೆ.
‘ಇತ್ತೀಚೆಗೆ ನನ್ನನ್ನು ನಾನೇ ಸ್ವಲ್ಪ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿರಂತರವಾದ ಗದ್ದಲ, ಸ್ಕ್ರೋಲಿಂಗ್ ಮತ್ತು ಎಲ್ಲದರ ಜೊತೆ ಅಪ್‌ಡೇಟ್ ಆಗಿರುವುದು. ಇದೆಲ್ಲವೂ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಭಾರ ಎನಿಸುತ್ತಿದೆ. ಅದಕ್ಕಾಗಿಯೇ ನಾನು ಸ್ವಲ್ಪ ಸಮಯದವರೆಗೆ ಇವುಗಳಿಂದ ದೂರ ಸರಿಯುತ್ತಿದ್ದೇನೆ. ನಿಧಾನವಾಗಿ ಸಾಗಲು, ಆಳವಾಗಿ ಉಸಿರಾಡಲು ಮತ್ತು ಯಾವುದು ನೈಜವೋ ಅದರೊಂದಿಗೆ ಮತ್ತೆ ಕನೆಕ್ಟ್ ಆಗಲು ಈ ನಿರ್ಧಾರ ಮಾಡಿದ್ದೇನೆ. ಸದ್ಯಕ್ಕೆ ಪೋಸ್ಟ್ ಮಾಡುವ ಕ್ಷಣಗಳಿಗಿಂತ, ಬದುಕುವ ಕ್ಷಣಗಳನ್ನು ಆರಿಸಿಕೊಳ್ಳುತ್ತಿದ್ದೇನೆ’ ಎಂದು ರಿಯಾ ಬರೆದುಕೊಂಡಿದ್ದಾರೆ.
2020ರಲ್ಲಿ ನಟ ಸುಶಾಂತ್ ಸಿಂಗ್ ರಜ್‌ಪೂತ್ ನಿಧನದ ನಂತರ ರಿಯಾ ಚಕ್ರವರ್ತಿ ತೀವ್ರವಾಗಿ ಸಾರ್ವಜನಿಕ ಟೀಕೆಗಳನ್ನು ಎದುರಿಸಬೇಕಾಗಿತ್ತು. ಆ ಕಠಿಣ ದಿನಗಳ ನಂತರ ಅವರು ನಿಧಾನವಾಗಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರಚಾರದಿಂದ ದೂರವಿದ್ದ ಅವರು, ಆಯ್ದ ಕಾರ್ಯಕ್ರಮಗಳು ಮತ್ತು ಪ್ರಾಜೆಕ್ಟ್‌ಗಳ ಮೂಲಕ ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳುತ್ತಿದ್ದಾರೆ.
ರಿಯಾ ಚಕ್ರವರ್ತಿ ಈಗ ನಟನೆಗೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಪ್ರಸಿದ್ಧ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಮುಂಬರುವ ನೆಟ್‌ಫ್ಲಿಕ್ಸ್ ಡ್ರಾಮಾ ಸರಣಿ ‘ಫ್ಯಾಮಿಲಿ ಬಿಸ್ನೆಸ್’ನಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಅನಿಲ್ ಕಪೂರ್, ವಿಜಯ್ ವರ್ಮಾ, ನೇಹಾ ಧೂಪಿಯಾ ಮತ್ತು ಧ್ರುವ್ ಸೆಹಗಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 2021ರಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದ ‘ಚೆಹ್ರೆ’ ಚಿತ್ರದ ನಂತರ ರಿಯಾ ಅವರು ನಟನೆಗೆ ಮರಳುತ್ತಿರುವುದು ಇದೇ ಮೊದಲು.
ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಕೇಸ್ನಲ್ಲಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್; ದೇವಸ್ಥಾನಕ್ಕೆ ಬಂದ ನಟಿ
ಇತ್ತೀಚೆಗಷ್ಟೇ ರಿಯಾ ಚಕ್ರವರ್ತಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ನ್ಯಾಯಾಲಯವು ಅವರ ಬ್ಯಾಂಕ್ ಖಾತೆಗಳನ್ನು ಬಳಸಲು ಅನುಮತಿ ನೀಡಿದೆ. 2020ರಲ್ಲಿ ಸುಶಾಂತ್ ಸಿಂಗ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮಾದಕವಸ್ತು ನಿಯಂತ್ರಣ ದಳವು ರಿಯಾ ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ವರ್ಷಗಟ್ಟಲೆ ಖಾತೆಗಳನ್ನು ಫ್ರೀಜ್ ಮಾಡಿಟ್ಟಿರುವುದರಿಂದ ತಮಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಮತ್ತು ಇನ್ನು ಮುಂದೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂಬ ರಿಯಾ ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.