ಜೈಲಿನಲ್ಲಿ ಕಳೆದ ಸಮಯ ಹೇಗಿತ್ತು? ಕರಾಳ ಅನುಭವದ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ
Rhea Chakraborty: ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಂದ ಮಾದಕ ವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದ ಸುಶಾಂತ್ರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ, ತಮ್ಮ ಜೈಲು ವಾಸದ ದಿನಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ನಟ ಸುಶಾಂತ್ ಸಿಂಗ್ (Sushant Singh) ಸಾವಿನಿಂದ ಅತೀವ ಸಮಸ್ಯೆ ಅನುಭವಿಸಿದ್ದು ನಟಿ ರಿಯಾ ಚಕ್ರವರ್ತಿ. ಸುಶಾಂತ್ ಸಿಂಗ್ರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸುಶಾಂತ್ ಸಿಂಗ್ ಸಾವಿಗೆ ಕಾರಣ ಎನ್ನಲಾಯ್ತು, ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ರಿಯಾ ಚಕ್ರವರ್ತಿಯ ಮಾನ ಹಾನಿ ಮಾಡಲಾಯ್ತು, ರಾಕ್ಷಸಿಯಂತೆ ಬಿಂಬಿಸಲಾಗಿತ್ತು. ಇದರ ನಡುವೆ ಸುಶಾಂತ್ ಸಿಂಗ್ ಸಾವಿನಿಂದ ಹೊರಬಂದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಜೈಲು ಪಾಲಾಗಬೇಕಾಯ್ತು. ಬರೋಬ್ಬರಿ ಒಂದು ತಿಂಗಳ ಕಾಲ ರಿಯಾ ಜೈಲಿನಲ್ಲಿದ್ದರು. ಹಳೆಯ ಕೆಟ್ಟ ನೆನಪುಗಳಿಂದ ಸಾವರಿಸಿಕೊಂಡು ಇತ್ತೀಚೆಗೆ ಮತ್ತೆ ಸಾಮಾಜಿಕ ಜೀವನಕ್ಕೆ ಮರಳಿರುವ ರಿಯಾ ಚಕ್ರವರ್ತಿ, ಇದೇ ಮೊದಲ ಬಾರಿಗೆ ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಟಾಕ್ ಶೋ ಒಂದರಲ್ಲಿ ಈ ಬಗ್ಗೆ ಮಾತನಾಡಿರುವ ರಿಯಾ ಚಕ್ರವರ್ತಿ, ‘ನೀವು ಅಲ್ಲಿ ಬರೀ ಸಂಖ್ಯೆ ಅಷ್ಟೆ, ಸಮಾಜದಿಂದ ದೂರ ಮಾಡಿ ಸಂಖ್ಯೆ ಒಂದನ್ನು ಕೊಟ್ಟು ಇಟ್ಟುಬಿಡುತ್ತಾರೆ. ಸಮಾಜದಲ್ಲಿರಲು ಯೋಗ್ಯರಲ್ಲ ಅನ್ನುವ ಕಾರಣಕ್ಕೆ ನಮ್ಮನ್ನು ಪ್ರತ್ಯೇಕ ಮಾಡುತ್ತಾರೆ. ಅಲ್ಲಿಯೇ ನಿಮ್ಮ ಬಗ್ಗೆ ನಿಮಗಿರುವ ಎಲ್ಲ ಅಹಂಗಳು ಸತ್ತು ಹೋಗುತ್ತವೆ. ನಾನು ಇದ್ದಿದ್ದು ವಿಚಾರಣಾಧೀನರಿಗೆ ಮೀಸಲಾಗಿರುವ ಜೈಲಿನಲ್ಲಿ. ಅಲ್ಲಿ ನನ್ನಂತೆ ಹಲವು ಮಹಿಳೆಯರಿದ್ದರು. ಅವರು ಸಹ ವಿಚಾರಣಾಧೀನ ಖೈದಿಗಳು” ಎಂದಿದ್ದಾರೆ ರಿಯಾ.
”ಅವರನ್ನು ನೋಡುತ್ತಾ, ಅವರೊಟ್ಟಿಗೆ ಬೆರೆತು ಮಾತನಾಡುತ್ತಾ ಆಡುತ್ತಾ ಅವರೊಳಗಿನ ಅದ್ಭುತಗಳು ನನಗೆ ಕಂಡವು. ಅಂಥಹಾ ಸಂಕಷ್ಟದ ಸ್ಥಿತಿಯಲ್ಲಿ ಸಹ ಅವರು ಸಂತೋಷವನ್ನು ಹುಡುಕಿಕೊಂಡಿದ್ದರು. ಪ್ರತಿ ಕ್ಷಣವನ್ನು ಹೇಗೆ ಖುಷಿಯಿಂದ ಕಳೆಯಬೇಕು ಎಂಬುದನ್ನು ಅವರು ಕಂಡುಕೊಂಡಿದ್ದರು. ಸಣ್ಣ-ಸಣ್ಣ ವಿಷಯಗಳ ಬಗ್ಗೆಯೂ ಅವರು ಸಂತಸ ವ್ಯಕ್ತಪಡಿಸುತ್ತಿದ್ದರು. ಭಾನುವಾರ ಸಮೋಸಾ ಕೊಡುತ್ತಾರೆ ಎಂಬುದು ಸಹ ಅವರಿಗೆ ಬಹಳ ಖುಷಿಯ, ಅದಕ್ಕಾಗಿ ನಿರೀಕ್ಷೆಯಿಂದ ಕಾಯುವ ವಿಷಯವಾಗಿತ್ತು” ಎಂದಿದ್ದಾರೆ ರಿಯಾ.
”ಅವರಲ್ಲಿ ಸಿಟ್ಟು, ಕೋಪ, ಬೇಸರ ಎಲ್ಲವೂ ಇತ್ತು ಆದರೆ ಅವ್ಯಾವುವು ಅವರ ಸಂತೋಷಕ್ಕೆ ಅಡ್ಡಿಯಾಗಿರಲಿಲ್ಲ. ಹಾಡುತ್ತಿದ್ದರು, ಕುಣಿಯುತ್ತಿದ್ದರು ಅವನ್ನೆಲ್ಲ ಅವರು ಎಂಜಾಯ್ ಮಾಡುತ್ತಿದ್ದರು. ಆ ಸಮಯ ನನ್ನ ಜೀವನದ ಅತ್ಯಂತ ಯಾತನಾಮಯ ಸಮಯವಾಗಿತ್ತು. ಆದರೆ ಸ್ವರ್ಗ, ನರಕ ಎಲ್ಲವೂ ನಾವಂದುಕೊಂಡಂತೆ ಇರುತ್ತದೆ. ಯಾವುದೇ ಸನ್ನಿವೇಶವನ್ನು ಇದೇ ಸ್ವರ್ಗ ಅಂದುಕೊಂಡರೆ, ಅದು ಸ್ವರ್ಗ, ನರಕ ಅಂದುಕೊಂಡರೆ ಅದು ನರಕ ಅಷ್ಟೆ. ಪ್ರತಿ ಬಾರಿಯೂ ಸ್ವರ್ಗದ ಊಹೆಯನ್ನೇ ಮಾಡುವುದು ಕಷ್ಟಕರ, ಆದರೆ ಸತತ ಪ್ರಯತ್ನದಿಂದ ಈ ಮನಸ್ಸಿನ ಯುದ್ಧದಲ್ಲಿ ಗೆಲುವು ಸಾಧಿಸಬಹುದು” ಎಂದಿದ್ದಾರೆ ರಿಯಾ ಚಕ್ರವರ್ತಿ.
ರಿಯಾ ಚಕ್ರವರ್ತಿ, ನಟ ಸುಶಾಂತ್ ಸಿಂಗ್ ಗೆ ಮಾದಕ ವಸ್ತು ನೀಡಿದ್ದರು ಎಂಬ ಆರೋಪದಲ್ಲಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಒಂದು ತಿಂಗಳ ಕಾಲ ಅವರು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಆದರು. ಅವರ ಸಹೋದರ ಸಹ ಇದೇ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದರು. ಸುಶಾಂತ್ ಸಿಂಗ್ ಮರಣಾನಂತರ ಹೊರ ಬಂದ ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ಕೆಲವು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಹಲವು ಬಾಲಿವುಡ್ ಸೆಲೆಬ್ರಿಟಿಗಳನ್ನು ವಿಚಾರಣೆ ಸಹ ಮಾಡಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ