ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರಿಗಂತೂ ರೋಹಿತ್ ಶೆಟ್ಟಿ ಬಗ್ಗೆ ತಿಳಿದಿರುತ್ತದೆ. ತಮ್ಮ ಕೆಲಸದ ಮೂಲಕ ಅಷ್ಟು ದೊಡ್ಡ ಹೆಸರು ಮಾಡಿದ್ದಾರೆ ಅವರು. ‘ಸಿಂಘಂ’, ‘ಸಿಂಘಂ ರಿಟರ್ನ್ಸ್’, ‘ಗೋಲ್ಮಾಲ್ 3’, ‘ಚೆನ್ನೈ ಎಕ್ಸ್ಪ್ರೆಸ್’, ‘ಗೋಲ್ಮಾಲ್ ಅಗೇನ್’, ‘ಸಿಂಬಾ’ ಹಾಗೂ ಇತ್ತೀಚೆಗೆ ತೆರೆಕಂಡ ‘ಸೂರ್ಯವಂಶಿ’ (Sooryavanshi) ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅವರದ್ದು. ಕೆಲ ಚಿತ್ರಗಳಿಗೆ ಅವರು ಬಂಡವಾಳ ಕೂಡ ಹೂಡಿದ್ದಾರೆ. ಈಗ ಅವರು ಪ್ರೊಡಕ್ಷನ್ ಹೌಸ್ (Production House) ನಿರ್ಮಾಣ ಮಾಡುವ ಆಲೋಚನೆಯಲ್ಲಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದರ ಜತೆಗೆ ಮತ್ತೊಂದು ದೊಡ್ಡ ಆಲೋಚನೆಯೂ ಅವರ ತಲೆಯಲ್ಲಿದೆ.
ಚಿತ್ರರಂಗದಲ್ಲಿ ನಟ/ನಟಿಯಾಗಿ, ನಿರ್ದೇಶಕನಾಗಿ ಹೆಸರು ಮಾಡಿದ ನಂತರದಲ್ಲಿ ಸಿನಿಮಾ ನಿರ್ಮಾಣಕ್ಕೆ ಇಳಿದವರ ಪಟ್ಟಿ ದೊಡ್ಡದಿದೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾದ ಮೇಲೆ ಅವರಿಗೆ ಒಂದು ಹಿಡಿತ ಬಂದಿದೆ. ಸಿನಿಮಾ ಸ್ಕ್ರಿಪ್ಟ್ ನೋಡಿಯೇ ಅವರು ಒಂದು ಜಡ್ಜ್ಮೆಂಟ್ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಅವರಿಗೆ ಇದೆ. ಈ ಕಾರಣಕ್ಕೆ ನಿರ್ಮಾಣ ಸಂಸ್ಥೆ ಆರಂಭಿಸುವ ಆಲೋಚನೆ ಅವರಿಗೆ ಬಂದಿದೆ! ಅಲ್ಲದೆ, ಮುಂಬೈನಲ್ಲಿ ಅತಿ ದೊಡ್ಡ ಸ್ಟುಡಿಯೋ ಆರಂಭಿಸುವ ಆಲೋಚನೆಯೂ ಅವರಿಗೆ ಇದೆ.
‘ರೋಹಿತ್ ಶೆಟ್ಟಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲು ರೋಹಿತ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಐದು ಸಿನಿಮಾಗಳು ಆರಂಭದ ಹಂತದಲ್ಲಿವೆ. ಪ್ರೊಡಕ್ಷನ್ ಹೌಸ್ ಘೋಷಣೆ ಮಾಡುವುದರ ಜತೆಗೆ ಸಿನಿಮಾ ಹೆಸರುಗಳನ್ನೂ ಘೋಷಣೆ ಮಾಡಲು ಅವರು ಆಲೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಸ್ವಂತ ಸ್ಟುಡಿಯೋ ಆರಂಭಿಸೋಕೂ ಅವರು ಚಿಂತನೆ ನಡೆಸಿದ್ದಾರೆ.
ಮುಂಬೈನ ಹಾಗೂ ಗುಜರಾತ್ನಲ್ಲಿ ಹಲವು ಜಾಗಗಳನ್ನು ರೋಹಿತ್ ಶೆಟ್ಟಿ ನೋಡಿಟ್ಟಿದ್ದಾರೆ. ಇದರಲ್ಲಿ ಕೆಲವನ್ನು ಅವರು ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸ್ಟುಡಿಯೋ ನಿರ್ಮಾಣ ಮಾಡುವ ಆಲೋಚನೆ ಅವರದ್ದು. ತಮ್ಮದೇ ಪ್ರೊಡಕ್ಷನ್ ಹೌಸ್ಗಳ ಚಿತ್ರಗಳನ್ನು ಇದೇ ಸ್ಟುಡಿಯೋಗಳಲ್ಲಿ ಶೂಟ್ ಮಾಡಬಹುದು. ಇದರಿಂದ ಸಿನಿಮಾದ ಬಜೆಟ್ ಕಡಿಮೆ ಆಗುತ್ತದೆ. ಜತೆಗೆ ಈ ಸ್ಟುಡಿಯೋಗಳನ್ನು ಬೇರೆ ಸಿನಿಮಾಗಳ ಚಿತ್ರೀಕರಣಕ್ಕೆ ಬಾಡಿಗೆಗೆ ನೀಡಿದರೆ ಒಂದಷ್ಟು ಕಮಾಯಿ ಆಗುತ್ತದೆ ಎನ್ನುವ ಆಲೋಚನೆ ಅವರದ್ದು. ಸದ್ಯ, ಈ ವಿಚಾರಗಳನ್ನು ಮೂಲಗಳು ಖಚಿತಪಡಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.
ರೋಹಿತ್ ಶೆಟ್ಟಿ ಸದ್ಯ ‘ಸರ್ಕಸ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ರಣವೀರ್ ಸಿಂಗ್, ಪೂಜಾ ಹೆಗ್ಡೆ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 2022ರ ದೀಪಾವಳಿಗೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ‘ಸಿಂಘಂ 3’ ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಇದರಲ್ಲಿ ಅಜಯ್ ದೇವಗನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಯಾವ ಖಾನ್ಗೂ ಕಮ್ಮಿ ಇಲ್ಲ ಅಕ್ಷಯ್ ಕುಮಾರ್; ವಿಶ್ವಾದ್ಯಂತ 200 ಕೋಟಿ ಬಾಚಿದ ‘ಸೂರ್ಯವಂಶಿ’