
ಜೂನಿಯರ್ ಎನ್ಟಿಆರ್ (Jr NTR) ಮತ್ತು ಹೃತಿಕ್ ರೋಷನ್ ಅವರು ಒಟ್ಟಿಗೆ ನಟಿಸಿದ ‘ವಾರ್ 2’ ಸಿನಿಮಾ (War 2 Movie) ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆಗಸ್ಟ್ 14ರಂದು ಬಿಡುಗಡೆ ಆದ ಈ ಸಿನಿಮಾ ಉತ್ತಮ ಓಪನಿಂಗ್ ಪಡೆದುಕೊಂಡಿತು. ನಿರ್ಮಾಪಕರಿಗೂ ಈ ಚಿತ್ರದ ಮೇಲೆ ಭರವಸೆ ಇತ್ತು. ಹಾಗಾಗಿ ಬರೋಬ್ಬರಿ 450 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಹಾಕಿದ ಬಂಡವಾಳ ಮರಳಿ ಬಂದಿಲ್ಲ! ಬಿಡುಗಡೆ ಆಗಿ 7 ದಿನ ಕಳೆದರೂ ಕೂಡ ನಿರ್ಮಾಪಕರಿಗೆ ಲಾಭ ಆಗಿಲ್ಲ. ಅಲ್ಲಿಗೆ, ‘ವಾರ್ 2’ ಸಿನಿಮಾ ಫ್ಲಾಪ್ (War 2 Movie Flop) ಎಂಬುದು ಖಚಿತ ಆಗಿದೆ.
ಬಾಕ್ಸ್ ಆಫೀಸ್ನಲ್ಲಿ ‘ವಾರ್ 2’ ಸಿನಿಮಾ ಮೊದಲ ದಿನ 29 ಕೋಟಿ ರೂಪಾಯಿ ಗಳಿಸಿತು. 2ನೇ ದಿನ ಬರೋಬ್ಬರಿ 46 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಆದರೆ ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ಕೇಳಿಬರಲು ಆರಂಭಿಸಿತು. ಹಾಗಾಗಿ 3ನೇ ದಿನ ಕಲೆಕ್ಷನ್ 27 ಕೋಟಿ ರೂಪಾಯಿಗೆ ಇಳಿಯಿತು. ಮರುದಿನ ಭಾನುವಾರ ಆದ ಕಾರಣ 28 ಕೋಟಿ ರೂಪಾಯಿ ಮಾಡಿತು. ಆದರೆ, ಸೋಮವಾರ (ಆಗಸ್ಟ್ 18) ದಿಢೀರ್ ಎಂದು 7.5 ಕೋಟಿ ರೂಪಾಯಿಗೆ ಕಲೆಕ್ಷನ್ ಕುಸಿಯಿತು.
ಬಾಕ್ಸ್ ಆಫೀಸ್ನಲ್ಲಿ 7 ದಿನಕ್ಕೆ ಈ ಸಿನಿಮಾ ಗಳಿಸಿರುವುದು 150.50 ಕೋಟಿ ರೂಪಾಯಿ ಮಾತ್ರ. ವಿದೇಶದ ಗಳಿಕೆಯನ್ನೂ ಸೇರಿಸಿ ನಿರ್ಮಾಪಕರಿಗೆ ಶೇರ್ ಬರುವುದು ಅಂದಾಜು 140 ಕೋಟಿ ರೂಪಾಯಿ ಎನ್ನಲಾಗಿದೆ. ಆಡಿಯೋ ರೈಟ್ಸ್, ಕಿರುತೆರೆ ಪ್ರಸಾರ ಹಕ್ಕು, ಒಟಿಟಿ ರೈಟ್ಸ್ ಮಾರಾಟದಿಂದ ಸುಮಾರು 150 ಕೋಟಿ ರೂಪಾಯಿ ಬಂದಿದೆ. ಎಲ್ಲವನ್ನೂ ಕೂಡಿ-ಕಳೆದರೆ ನಿರ್ಮಾಪಕರಿಗೆ 60ರಿಂದ 70 ಕೋಟಿ ರೂಪಾಯಿ ನಷ್ಟ ಆಗಲಿದೆ!
‘ವಾರ್ 2’ ಬಿಡುಗಡೆ ಆದ ದಿನವೇ ‘ಕೂಲಿ’ ಸಿನಿಮಾ ಕೂಡ ತೆರೆಕಂಡಿತ್ತು. ಇದರಿಂದ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಉಂಟಾಗಿತ್ತು. ಹಾಗಾಗಿ ‘ವಾರ್ 2’ ಗಳಿಕೆ ಮೇಲೆ ಪೆಟ್ಟು ಬಿತ್ತು. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿದ್ದರಿಂದ ದಿನದಿಂದ ದಿನಕ್ಕೆ ಕಲೆಕ್ಷನ್ ಕುಸಿಯುತ್ತಾ ಹೋಯಿತು. ಕಥೆಯಲ್ಲಿ ಗಟ್ಟಿತನ ಇಲ್ಲ ಎಂಬ ಕಾರಣದಿಂದ ಪ್ರೇಕ್ಷಕರು ಈ ಸಿನಿಮಾವನ್ನು ತಿರಸ್ಕರಿಸಿದರು.
ಇದನ್ನೂ ಓದಿ: War 2 Review: ಆ್ಯಕ್ಷನ್ ಅಬ್ಬರದ ನಡುವೆ ಮಂಕಾದ ‘ವಾರ್ 2’ ಕಥೆ
ಅಯಾನ್ ಮುಖರ್ಜಿ ಅವರು ‘ವಾರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಮೂಲಕ ಆದಿತ್ಯ ಚೋಪ್ರಾ ಅವರು ಬಂಡವಾಳ ಹೂಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್’ನಲ್ಲಿ ಈ ಮೊದಲು ಬಂದಿದ್ದ ‘ವಾರ್’, ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ‘ಪಠಾಣ್’, ‘ಟೈಗರ್ 3’ ಸಿನಿಮಾಗಳು ಹಿಟ್ ಆಗಿದ್ದವು. ಆದರೆ ‘ವಾರ್ 2’ ಸಿನಿಮಾ ಸೋಲು ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.