
ಮೋಹಿತ್ ಸೂರಿ ನಿರ್ದೇಶನದ ‘ಸೈಯಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಯುವ ಹೀರೋ ಅಹಾನ್ ಪಾಂಡೆ ಹಾಗೂ ಅನೀತಾ ಪಡ್ಡಾ ನಟಿಸಿದ್ದಾರೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 20.50 ಕೋಟಿ ರೂಪಾಯಿ. ಮೊದಲ ದಿನವೇ ಸಿನಿಮಾ ಇಷ್ಟು ದೊಡ್ಡ ಓಪನಿಂಗ್ ಪಡೆದಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಬಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳೇ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲು ವಿಫಲವಾಗುತ್ತಿವೆ. ಅಕ್ಷಯ್ ಕುಮಾರ್ ಚಿತ್ರಗಳು ಎರಡಂಕಿ ಕಲೆಕ್ಷನ್ ಮಾಡುತ್ತಿಲ್ಲ. ಹೀಗಿರುವಾಗ ಅಹಾನ್ ಪಾಂಡೆ ಚಿತ್ರಕ್ಕೆ ಭರ್ಜರಿ ಮೈಲೇಜ್ ಸಿಕ್ಕಿದೆ. ಈ ಸಿನಿಮಾದ ಕಲೆಕ್ಷನ್ ನೋಡಿ ಅನೇಕರು ಹುಬ್ಬೇರಿಸಿದ್ದಾರೆ.
ಈ ಮೊದಲು ಮೋಹಿತ್ ಸೂರಿ ಅವರ ‘ಮರ್ಡರ್ 2’ (6.95 ಕೋಟಿ ರೂಪಾಯಿ), ‘ಆಶಿಕಿ 2’ (6.10ಕೋಟಿ ರೂಪಾಯಿ), ಹಾಫ್ ಗರ್ಲ್ಫ್ರೆಂಡ್ (10.30 ಕೋಟಿ ರೂಪಾಯಿ) ಹಾಗೂ ಏಕ್ ವಿಲನ್ (16 ಕೋಟಿ ರೂಪಾಯಿ) ಚಿತ್ರಗಳ ಮೊದಲ ದಿನದ ಕಲೆಕ್ಷನ್ ‘ಸೈಯಾರ’ ಹಿಂದಿಕ್ಕಿದೆ. ಇದು ಮೋಹಿತ್ ಸೂರಿ ಅವರ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿದೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: ‘ಎಕ್ಕ’ ಸಿನಿಮಾ ಗಳಿಕೆ; ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಯುವ
‘ಸೈಯಾರ’ ಸಿನಿಮಾ ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಪಡೆದಿದೆ. ಈ ಚಿತ್ರಕ್ಕೆ 12 ಸಾವಿರಕ್ಕೂ ಅಧಿಕ ಮಂದಿ ರೇಟಿಂಗ್ ಕೊಟ್ಟಿದ್ದು, 9.2 ಅಂಕ ಪಡೆದಿದೆ. ಈ ಚಿತ್ರವನ್ನು ಜನರು ಬಹುವಾಗಿ ಇಷ್ಟಪಡುತ್ತಿದ್ದಾರೆ.
ಅಹಾನ್ ಪಾಂಡೆ ಚಿತ್ರರಂಗದ ಹಿನ್ನೆಲೆಯಿಂದ ಬಂದವರಲ್ಲ ಎಂದರೆ ತಪ್ಪಾಗುತ್ತದೆ. ಅವರು ಚಂಕಿ ಪಾಂಡೆ ಸಹೋದರ ಚಿಕ್ಕಿ ಪಾಂಡೆಯ ಮಗ. ಶಾರುಖ್ ಖಾನ್ ಅವರು ಅತ್ಯಂತ ಹಳೆಯ ಹಾಗೂ ಆಪ್ತ ಗೆಳೆಯರಲ್ಲಿ ಚಿಕ್ಕಿ ಪಾಂಡೆ ಒಬ್ಬರು. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರು ಈ ಮೊದಲು ಕಿರಿಕ್ ಮಾಡಿಕೊಂಡು ಬೇರೆ ಆಗಿದ್ದರು. ಆಗ ಇವರನ್ನು ಒಂದು ಮಾಡಿದ್ದು ಇದೇ ಚಿಕ್ಕಿ ಪಾಂಡೆ. ಅವರ ಮಗನನ್ನು ಯಶ್ ರಾಜ್ ಫಿಲ್ಮ್ಸ್ ಲಾಂಚ್ ಮಾಡಿದೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಅವರೇ ಹೇಳಿ ಅಹಾನ್ ಪಾಂಡೆಯನ್ನು ಲಾಂಚ್ ಮಾಡಿಸಿರಬಹುದು ಎಂಬ ಮಾತೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.