
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam) ಉಗ್ರರು ನಡೆಸಿದ ದಾಳಿಗೆ ಸೆಲೆಬ್ರಿಟಿಗಳು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈಗಾಗಲೇ ಅನೇಕ ನಟ-ನಟಿಯರು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಉಗ್ರರ ಗುಂಡಿಗೆ 26 ಜನರು ಬಲಿ ಆಗಿರುವುದರಿಂದ ಶೋಕದ ವಾತಾವರಣ ಇದೆ. ಇಂಥ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಬೇಡ ಎಂದು ಸಲ್ಮಾನ್ ಖಾನ್ (Salman Khan) ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ವಿದೇಶದ ಪ್ರವಾಸವನ್ನು ಮುಂದೂಡಿಕೊಂಡಿದ್ದಾರೆ. ಆ ಬಗ್ಗೆ ಇನ್ಸ್ಟಾಗ್ರಾಮ್ ಮೂಲಕ ಸಲ್ಮಾನ್ ಖಾನ್ ಅವರು ಮಾಹಿತಿ ನೀಡಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅವರು ಬೇರೆ ಬೇರೆ ದೇಶಗಳಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾರೆ. ತಮ್ಮ ಜೊತೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಹಲವು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಆದರೆ ಈಗ ಲಂಡನ್ನಲ್ಲಿ ನೀಡಬೇಕಿದ್ದ ಮನರಂಜನಾ ಕಾರ್ಯಕ್ರಮವನ್ನು ಸಲ್ಮಾನ್ ಖಾನ್ ಮುಂದೂಡಿದ್ದಾರೆ.
ಮೇ 4 ಮತ್ತು ಮೇ 5ರಂದು ಲಂಡನ್ನ ಮ್ಯಾಂಚೆಸ್ಟರ್ನಲ್ಲಿ ‘ದಿ ಬಾಲಿವುಡ್ ಬಿಗ್ ಒನ್’ ಎಂಬ ಶೋ ಮಾಡಲು ತೀರ್ಮಾನಿಸಲಾಗಿತ್ತು. ಈ ಶೋನಲ್ಲಿ ಸಲ್ಮಾನ್ ಖಾನ್ ಜೊತೆ ದಿಶಾ ಪಟಾನಿ, ಕೃತಿ ಸನೋನ್, ಟೈಗರ್ ಶ್ರಾಫ್, ವರುಣ್ ಧವನ್, ಮಾಧುರಿ ದೀಕ್ಷಿತ್, ಸಾರಾ ಅಲಿ ಖಾನ್ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಬೇಕಿತ್ತು. ಆದರೆ ಪಹಲ್ಗಾಮ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಶೋ ದಿನಾಂಕ ಮುಂದೂಡಲು ಸಲ್ಮಾನ್ ಖಾನ್ ತೀರ್ಮಾನಿಸಿದ್ದಾರೆ.
‘ಕಾಶ್ಮೀರದಲ್ಲಿ ನಡೆದ ದುರಂತದಿಂದ ತೀವ್ರ ನೋವಾಗಿದೆ. ಹಾಗಾಗಿ ದಿ ಬಾಲಿವುಡ್ ಬಿಗ್ ಒನ್ ಶೋ ಮುಂದೂಡುತ್ತಿದ್ದೇವೆ. ಅಭಿಮಾನಿಗಳು ಈ ಶೋಗಾಗಿ ಎಷ್ಟು ಕಾತರರಾಗಿದ್ದಾರೆ ಎಂಬುದು ನಮಗೆ ಗೊತ್ತಿದೆ. ಆದರೆ ಈ ಶೋಕದ ಸಂದರ್ಭದಲ್ಲಿ ಇದೇ ಸರಿಯಾದ ನಿರ್ಧಾರ. ನಿರಾಸೆ ಮಾಡಿದ್ದಕ್ಕಾಗಿ ಕ್ಷಮೆ ಇರಲಿ. ಹೊಸ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು’ ಎಂದು ಸಲ್ಮಾನ್ ಖಾನ್ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದವನು ಮಾನಸಿಕ ಅಸ್ವಸ್ಥ; ಗುಜರಾತ್ನಲ್ಲಿ ಬಂಧನ
ಈ ಮೊದಲು ಕೂಡ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದರು. ‘ಕಾಶ್ಮೀರವು ಭೂಮಿ ಮೇಲಿನ ಸ್ವರ್ಗ. ಆದರೆ ಅದು ನರಕ ಆಗುತ್ತಿದೆ. ಅಮಾಯಕರನ್ನು ಗುರಿಯಾಗಿಸಲಾಗಿದೆ. ಅವರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಓರ್ವ ಅಮಾಯಕನನ್ನು ಕೊಲ್ಲುವುದು ಎಂದರೆ ಇಡೀ ಜಗತ್ತನ್ನು ಕೊಂದಂತೆ’ ಎಂದು ಸಲ್ಮಾನ್ ಖಾನ್ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.