ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದವನು ಮಾನಸಿಕ ಅಸ್ವಸ್ಥ; ಗುಜರಾತ್ನಲ್ಲಿ ಬಂಧನ
ಗುಜರಾಜ್ನ ವಡೋದರದಿಂದ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶ ಬಂದಿತ್ತು. ಮುಂಬೈ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದು ತಿಳಿದು ಬಂದಿದೆ. ಅಲ್ಲದೇ ಆತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾನೆ. ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಆಗಾಗ ಜೀವ ಬೆದರಿಕೆ ಹಾಕಲಾಗುತ್ತದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಈಗಾಗಲೇ ಅನೇಕ ಬಾರಿ ಬೆದರಿಕೆ ಹಾಕಲಾಗಿದೆ. ಕೇವಲ ಬೆದರಿಕೆ ಹಾಕಿ ಸುಮ್ಮನಾಗಿಲ್ಲ, ಕಳೆದ ವರ್ಷ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಕೂಡ ನಡೆದಿತ್ತು. ಹಾಗಾಗಿ ಪೊಲೀಸರು ಅಲರ್ಟ್ ಆಗಿರುತ್ತಾರೆ. ಯಾವುದೇ ವ್ಯಕ್ತಿಯಿಂದ ಜೀವ ಬೆದರಿಕೆ (Death Threat) ಸಂದೇಶ ಬಂದರೆ ಕೂಡಲೇ ಕ್ರಮ ಕೈಗೊಳ್ಳುತ್ತಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಶಾಕಿಂಗ್ ಸಂಗತಿ ಏನೆಂದರೆ, ಬೆದರಿಕೆ ಹಾಕಿದವನು ಮಾನಸಿಕ ಅಸ್ವಸ್ಥ (Mentally ill) ಎಂಬುದು ತಿಳಿದುಬಂದಿದೆ.
ಭಾನುವಾರ (ಏಪ್ರಿಲ್ 13) ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಒಂದು ಸಂದೇಶ ಬಂದಿತ್ತು. ಅದರಲ್ಲಿ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಲಾಗಿತ್ತು. ಬಾಂಬ್ ಇಟ್ಟು ಸಲ್ಮಾನ್ ಖಾನ್ ಅವರ ಕಾರನ್ನು ಸ್ಫೋಟಿಸಲಾಗುವುದು ಹಾಗೂ ಮನೆಗೆ ನುಗ್ಗಿ ಜಡ್ ಪ್ಲಸ್ ಭದ್ರತಾ ಸಿಬ್ಬಂದಿಗೆ ಹಲ್ಲೆ ಮಾಡಲಾಗುವುದು ಎಂದು ಬೆದರಿಕೆ ಸಂದೇಶ ಕಳಿಸಲಾಗಿತ್ತು.
ಕಿಡಿಗೇಡಿಯಿಂದ ಇಂಥ ಸಂದೇಶ ಬಂದ ಕೂಡಲೇ ಮುಂಬೈ ಪೊಲೀಸರು ಅಲರ್ಟ್ ಆದರು. ಸಲ್ಮಾನ್ ಖಾನ್ ಅವರ ಮನೆಗೆ ಭದ್ರತೆ ಹೆಚ್ಚಿಸಲಾಯಿತು. ಬೆದರಿಕೆ ಸಂದೇಶ ಕಳಿಸಿದವನು ಯಾರು ಎಂಬುದನ್ನು ಹುಡುಕಿಕೊಂಡು ಮುಂಬೈ ಪೊಲೀಸರು ಹೊರಟರು. ತನಿಖೆ ಚುರುಕುಗೊಂಡಾಗ ಬೆದರಿಕೆ ಕಳಿಸಿದವನು ಗುಜರಾಜ್ನ ವಡೋದರದಲ್ಲಿ ಇದ್ದಾನೆ ಎಂಬುದು ತಿಳಿಯಿತು.
ಮುಂಬೈ ಪೊಲೀಸರು ವಡೋದರದ ಸ್ಥಳೀಯ ಪೊಲೀಸರ ಜೊತೆಗೂಡಿ ಸೋಮವಾರ (ಏಪ್ರಿಲ್ 14) ಆರೋಪಿಯನ್ನು ಬಂಧಿಸಿದ್ದಾರೆ. ಆತನ ಹೆಸರು ಮಯಾಂಕ್ ಪಾಂಡೆ ಎನ್ನಲಾಗಿದೆ. ಆತನ ಮಾನಸಿಕ ಆರೋಗ್ಯ ಸರಿ ಇಲ್ಲ ಎಂಬುದು ಗೊತ್ತಾಗಿದೆ. ಅಲ್ಲದೇ ಆತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾನೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಆತನಿಗೆ ನೋಟಿಸ್ ನೀಡಿ, ವಿಚಾರಣೆಯಲ್ಲಿ ಹಾಜರಾಗುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ
ಜೀವ ಬೆದರಿಕೆಯ ಕಾರಣದಿಂದ ಸಲ್ಮಾನ್ ಖಾನ್ ಅವರು ಆತಂಕದಲ್ಲೇ ತಿರುಗಾಡುವಂತಾಗಿದೆ. ಅದರಲ್ಲೂ, ಮನೆ ಮೇಲೆ ಗುಂಡಿನ ದಾಳಿ ನಡೆದ ನಂತರ ಅವರ ಆಪ್ತರಿಗೆ ಹೆಚ್ಚು ಆತಂಕ ಆಯಿತು. ಈ ಬಗ್ಗೆ ಅವರು ‘ಸಿಕಂದರ್’ ಸಿನಿಮಾದ ಬಿಡುಗಡೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ‘ಎಷ್ಟು ಆಯಸ್ಸು ಬರೆದಿದೆಯೋ ಅಷ್ಟೇ’ ಎಂದು ಸಲ್ಮಾನ್ ಖಾನ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.