ಸತತವಾಗು ಸೋಲು ಕಾಣುತ್ತಿದ್ದ ಬಾಲಿವುಡ್ (Bollywood) ಸ್ಟಾರ್ ನಟರು, ಗೆಲುವಿಗಾಗಿ ದಕ್ಷಿಣ ಭಾರತ ಸಿನಿಮಾ ನಿರ್ದೇಶಕರ ಮೊರೆ ಹೋಗಿದ್ದಾರೆ. ಮೊದಲಿಗೆ ಶಾರುಖ್ ಖಾನ್, ತಮಿಳಿನ ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾದಲ್ಲಿ ನಟಿಸಿದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ ಸಲ್ಮಾನ್ ಖಾನ್ ಇದೀಗ ಮುರುಗದಾಸ್ ನಿರ್ದೇಶನದ ‘ಸಿಖಂಧರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಆಮಿರ್ ಖಾನ್ ಲೋಕೇಶ್ ಕನಗರಾಜು ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಸಲ್ಮಾನ್ ಖಾನ್ ಅಭಿಮಾನಿಗಳು ದಕ್ಷಿಣ ಭಾರತ ನಿರ್ದೇಶಕನ ಮೇಲೆ ಉರಿದು ಬಿದ್ದಿದ್ದಾರೆ, ಎರಡು ತಲೆ ಹಾವು ಎಂದು ನಿಂದಿಸುತ್ತಿದ್ದಾರೆ.
ಶಾರುಖ್ ಖಾನ್ಗೆ ‘ಜವಾನ್’ ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಅಟ್ಲಿ ಇದೀಗ ಸಲ್ಮಾನ್ ಖಾನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ‘ಜವಾನ್’ ಸಿನಿಮಾದ ಬಳಿಕ ತಾವು ಸಲ್ಮಾನ್ ಖಾನ್ ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುವುದಾಗಿ ಅಟ್ಲಿ ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಅಭಿಮಾನಿಗಳು ಇದರಿಂದ ಖುಷಿಯಾಗಿದ್ದರು. ಆದರೆ ಈಗ ನೋಡಿದರೆ ಹಠಾತ್ತನೆ ರೂಟ್ ಬದಲಿಸಿರುವ ಅಟ್ಲಿ, ತಾವು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದು ಸಲ್ಮಾನ್ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ.
ತಮಗಾಗಿ ಸಿನಿಮಾ ಮಾಡುತ್ತಾರೆ ಎಂಬ ಖುಷಿಯಲ್ಲಿ, ಅಟ್ಲಿ ನಿರ್ಮಾಣದ ‘ಬೇಬಿ ಜಾನ್’ ಹಿಂದಿ ಸಿನಿಮಾದ ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಆದರೆ ಈಗ ನೋಡಿದರೆ ಅಟ್ಲಿ ಕೈ ಎತ್ತಿದ್ದಾರೆ. ಸಲ್ಮಾನ್ ಖಾನ್ಗಾಗಿ ಮಾಡಿಕೊಂಡಿದ್ದ ಕತೆಯನ್ನು ಅಲ್ಲು ಅರ್ಜುನ್ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಭಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ನವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
ಸಲ್ಮಾನ್ ಖಾನ್ ಪ್ರಸ್ತುತ ‘ಸಿಖಂಧರ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ‘ಕತ್ತಿ’, ‘ಗಜಿನಿ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮುರುಗದಾಸ್ ಈ ಸಿನಿಮಾದ ನಿರ್ದೇಶಕ. ಇದರ ಬಳಿಕ ಯಶ್ ರಾಜ್ ಫಿಲಮ್ಸ್ನ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Wed, 5 March 25