Sara Ali Khan: ‘ನಿಮಗೆ ಇಷ್ಟ ಇಲ್ಲ ಅಂತ ನಾನು ದೇವಸ್ಥಾನಕ್ಕೆ ಹೋಗೋದು ನಿಲ್ಲಿಸಲ್ಲ’: ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್ ಆಗಿದೆ. ಈ ಚಿತ್ರದ ಗೆಲುವಿನಿಂದ ಸಾರಾ ಅಲಿ ಅವರ ಡಿಮ್ಯಾಂಡ್ ಹೆಚ್ಚಿದೆ.
ನಟಿ ಸಾರಾ ಅಲಿ ಖಾನ್ (Sara Ali Khan) ಅವರಿಗೆ ಟ್ರೋಲ್ ಕಾಟ ಹೊಸದೇನೂ ಅಲ್ಲ. ಆಗಾಗ ಅವರು ಟ್ರೋಲ್ ಆಗುತ್ತಾರೆ. ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಎಂಬ ಕಾರಣಕ್ಕೆ ಬಾಲಿವುಡ್ನಲ್ಲಿ ಅವರಿಗೆ ಸುಲಭವಾಗಿ ಅವಕಾಶಗಳು ಸಿಕ್ಕವು. ಆದರೆ ಅಷ್ಟು ಸುಲಭವಾಗಿ ಗೆಲುವು ಸಿಗಲಿಲ್ಲ. ಅವರನ್ನು ನೆಪೋ ಕಿಡ್ ಎಂದು ಕರೆಯಲಾಗುತ್ತದೆ. ಅಂದರೆ ನೆಪೋಟಿಸಂ ಸಹಾಯದಿಂದ ಬೆಳೆದ ಸ್ಟಾರ್ ಕಲಾವಿದರ ಮಗಳು ಎಂದು ಅವರನ್ನು ಹೀಯಾಳಿಸಲಾಗುತ್ತದೆ. ಅದೂ ಸಾಲದೆಂಬಂತೆ ಸಾರಾ ಅಲಿ ಖಾನ್ ಅವರ ದೈವ ಭಕ್ತಿಯ ಬಗ್ಗೆಯೂ ಟೀಕೆ ಎದುರಾಗುತ್ತದೆ. ಇತ್ತೀಚೆಗೆ ಅವರು ಹಿಂದೂ ದೇವಸ್ಥಾನಗಳಿಗೆ (Hindu Temple) ಭೇಟಿ ನೀಡಿದ್ದರು. ಆಗ ಅವರನ್ನು ಟ್ರೋಲ್ ಮಾಡಲಾಗಿತ್ತು. ಅದಕ್ಕೆ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಾರಾ ಅಲಿ ಖಾನ್ ಅವರು ಕೇದಾರನಾಥ, ಉಜ್ಜಯಿನಿ ಮಹಾಕಾಳ ದೇವಸ್ಥಾನ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಹಿಂದೂಗಳು ಆರಾಧಿಸುವ ಈ ಕ್ಷೇತ್ರಗಳಿಗೆ ಸಾರಾ ಅಲಿ ಖಾನ್ ತೆರಳಿದ್ದು ಸರಿಯಲ್ಲ ಎಂದು ಒಂದು ವರ್ಗದ ಜನರು ಅವರನ್ನು ಟ್ರೋಲ್ ಮಾಡಿದ್ದರು. ಅಂಥವರಿಗೆ ಸಾರಾ ತಿರುಗೇಟು ನೀಡಿದ್ದಾರೆ. ‘ಇದು ನಿಮಗೆ ಸರಿ ಎನಿಸಿದರೆ ಓಕೆ. ನಿಮಗೆ ಇಷ್ಟ ಆಗುತ್ತಿಲ್ಲ ಎಂದ ಮಾತ್ರಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ’ ಎಂದು ಸಾರಾ ಆಲಿ ಖಾನ್ ಹೇಳಿದ್ದಾರೆ. ‘ಹಿಂದುಸ್ತಾನ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Sara Ali Khan: ಸಿನಿಮಾ ಗೆದ್ದ ಖುಷಿಯಲ್ಲಿ ಕ್ಯೂಟ್ ಫೋಟೋ ಹಂಚಿಕೊಂಡ ನಟಿ ಸಾರಾ ಅಲಿ ಖಾನ್
ಈ ಹಿಂದೆ ಕೂಡ ಸಾರಾ ಅಲಿ ಖಾನ್ ಅವರು ಇಂಥ ಟ್ರೋಲ್ಗಳ ಬಗ್ಗೆ ಮಾತನಾಡಿದ್ದರು. ‘ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಮಾತ್ರ ಸಂಬಂಧಿಸಿವೆ. ನಾನು ಅಜ್ಮೇರ್ ಶರೀಫ್ ದರ್ಗಾಗೆ ಹೋಗುವಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ತೆರಳುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ಅದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಿಕೊಳ್ಳಲಿ. ಅದರಿಂದ ನನಗೆ ತೊಂದರೆ ಇಲ್ಲ. ನಿಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು. ನಾನು ಆ ಶಕ್ತಿಯನ್ನು ನಂಬುವವಳು’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Sara Ali Khan: ಮಹಾಕಾಳೇಶ್ವರ ದೇವಸ್ಥಾನಕ್ಕೆ ಸಾರಾ ಅಲಿ ಖಾನ್ ಭೇಟಿ; ಸೈಫ್ ಪುತ್ರಿಯ ಟೆಂಪಲ್ ರನ್ ಬಗ್ಗೆ ಕೆಲವರ ತಕರಾರು
ಸಿನಿಮಾ ವಿಚಾರಕ್ಕೆ ಬರೋದಾದರೆ, ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರು ಜೋಡಿಯಾಗಿ ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ‘ಆದಿಪುರುಷ್’ ತೆರೆಕಂಡ ಬಳಿಕ ಇದರ ಹವಾ ಕಡಿಮೆ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಇನ್ನೂ ಅನೇಕ ಕಡೆಗಳಲ್ಲಿ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಗೆಲುವಿನಿಂದ ಸಾರಾ ಅಲಿ ಖಾನ್ ಅವರಿಗೆ ಡಿಮ್ಯಾಂಡ್ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.