
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿರುವುದು ಕಂಡುಬಂದಿದೆ. ಪತ್ನಿ ಗೌರಿ ಖಾನ್, ಮಕ್ಕಳಾದ ಸುಹಾನಾ ಖಾನ್, ಆರ್ಯನ್ ಖಾನ್ ಮತ್ತು ಅಬ್ರಾಮ್ ಖಾನ್ ಅವರೊಂದಿಗೆ ಶಾರುಖ್ ಅವರು ಲಂಡನ್ ನಗರದಲ್ಲಿ ಸಮಯ ಕಳೆಯುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಒಂದೆಡೆ ಅಭಿಮಾನಿಗಳಿಗೆ ಈ ಫೋಟೋಗಳು ಸಂತಸ ತಂದಿದ್ದರೆ, ಮತ್ತೊಂದೆಡೆ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆ (Student Protest) ಕುರಿತು ಶಾರುಖ್ ಮೌನ ವಹಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆ ವ್ಯಕ್ತವಾಗಿದೆ.
ಶುಕ್ರವಾರ (ಜುಲೈ 24) ರಾತ್ರಿಯಿಂದೀಚೆಗೆ ಲಂಡನ್‌ನ ಬೀದಿಗಳಲ್ಲಿ ಶಾರುಖ್ ಖಾನ್ ಕುಟುಂಬದೊಂದಿಗೆ ಕ್ಯಾಶುಯಲ್ ಉಡುಪಿನಲ್ಲಿ ಓಡಾಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾರುಖ್ ಸರಳವಾದ ಟೀ-ಶರ್ಟ್, ಬ್ಯಾಗಿ ಪ್ಯಾಂಟ್ ಹಾಗೂ ಹೂಡಿ ಧರಿಸಿದ್ದದರೆ, ಗೌರಿ ಖಾನ್ ಗ್ರೇ ಪೈಜಾಮ ಮತ್ತು ತಿಳಿ ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ಇನ್ನು ಮಗಳು ಸುಹಾನಾ ಖಾನ್ ಗ್ರೇ ಬಣ್ಣದ ಉಡುಪಿನಲ್ಲಿ ಸಿಂಪಲ್ ಹಾಗೂ ಸೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಒಂದೆಡೆ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಹೋರಾಟದ ಬಗ್ಗೆ ಶಾರುಖ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನು ನೆಟ್ಟಿಗರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎದ್ದಿರುವಾಗ ಶಾರುಖ್ ಮೌನ ವಹಿಸಿ ವಿದೇಶದಲ್ಲಿ ರಜೆ ಕಳೆಯುತ್ತಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
[Latest] : Shah Rukh Khan and Gauri Khan spotted in London. ✨😍@iamsrk#ShahRukhKhan #GauriKhan #TeamShahRukhKhan #TeamSRKIndonesia pic.twitter.com/OBwdTB9aeY
— Team SRK Indonesia (@TSRKIndonesia) July 24, 2026
ಆದಾಗ್ಯೂ, ಶಾರುಖ್ ಖಾನ್ ಮೌನವನ್ನು ಸಮರ್ಥಿಸಿಕೊಂಡು ಅವರ ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ಜನರು ಈಗ ಅವರನ್ನು ಬೆನ್ನೆಲುಬಿಲ್ಲದವರು ಎಂದು ಕರೆಯುತ್ತಿದ್ದಾರೆ. ಆದರೆ ಈ ಹಿಂದೆ ಅವರು ದೇಶದ ವಿಷಯಗಳಲ್ಲಿ ಧ್ವನಿ ಎತ್ತಿದಾಗಲೆಲ್ಲಾ ಅವರ ಮನೋಬಲವನ್ನು ಜನರು ಕುಗ್ಗಿಸಲು ಯತ್ನಿಸಿದ್ದರು. ಪ್ರತಿಯೊಂದು ಬಾರಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದಾಗ ಅವರ ಮೇಲೆ ಅಪಪ್ರಚಾರ ಮಾಡಲಾಯಿತು. ಈಗ ಶಾರುಖ್ ಏಕೆ ಮಾತನಾಡುತ್ತಿಲ್ಲ ಅಂತ ಜನರು ಪ್ರಶ್ನಿಸುತ್ತಿದ್ದಾರೆ’ ಎಂದು ಅಭಿಮಾನಿಯೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ಕಿಂಗ್’ ಚಿತ್ರಕ್ಕೆ 450 ಕೋಟಿ ರೂ. ಬಜೆಟ್; ಶಾರುಖ್ ಖಾನ್ ವೃತ್ತಿಜೀವನದ ದುಬಾರಿ ಸಿನಿಮಾ
ಮತ್ತೊಬ್ಬ ಅಭಿಮಾನಿಯು ಸೋಶಿಯಲ್ ಮೀಡಿಯಾದ ವಾಸ್ತವವನ್ನು ಬಿಚ್ಚಿಡುತ್ತಾ, ‘ಅವರ ಮೇಲೆ ನೂರಾರು ಕೋಟಿ ರೂಪಾಯಿಗಳ ಹೂಡಿಕೆ ಇರುತ್ತದೆ. ಸಾವಿರಾರು ಜನರ ಜೀವನ, ಸಿನಿಮಾಗಳ ಬಿಡುಗಡೆ ಮತ್ತು ನಿರ್ಮಾಪಕ-ನಿರ್ದೇಶಕರ ಭವಿಷ್ಯ ಅವರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಒಂದು ಸಣ್ಣ ಟ್ವೀಟ್ ಕೂಡ ಇಡೀ ಪ್ರಾಜೆಕ್ಟ್ ಅನ್ನು ಅಪಾಯಕ್ಕೆ ಸಿಲುಕಿಸಬಹುದು. ಸೋಶಿಯಲ್ ಮೀಡಿಯಾ ಅತ್ಯಂತ ಕ್ರೂರವಾಗಿದೆ’ ಎಂದು ನಟನ ಮೌನದ ಹಿಂದಿನ ಜವಾಬ್ದಾರಿಯನ್ನು ಎತ್ತಿಹಿಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.