
ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಆಮಿರ್ ಖಾನ್ (Aamir Khan) ಅವರಿಗೆ ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿಲ್ಲ. ‘ಥಗ್ಸ್ ಆಫ್ ಹಿಂದೂಸ್ತಾನ್’, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳು ಸೋತವು. ಆ ಬಳಿಕ ಅವರು ದೀರ್ಘ ಗ್ಯಾಪ್ ಪಡೆದುಕೊಂಡರು. ಈಗ ಅವರು ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಆಮಿರ್ ಖಾನ್ ನಟಿಸಿದ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ಜೂನ್ 20ರಂದು ರಿಲೀಸ್ ಆಗಲಿದೆ. ಹೇಗಾದರೂ ಮಾಡಿ ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಆಮಿರ್ ಖಾನ್ ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್ (Salman Khan) ಕೂಡ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ.
‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಸ್ವತಃ ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ಆದ್ದರಿಂದ ಅವರಿಗೆ ಗೆಲುವು ಅನಿವಾರ್ಯ. ಚಿತ್ರವನ್ನು ಪ್ರಚಾರ ಮಾಡುವ ಸಲುವಾಗಿ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಸಾಲದೆಂಬಂತೆ, ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಪ್ರೀಮಿಯರ್ ಶೋ ಏರ್ಪಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜೂನ್ 19ರಂದು ಮುಂಬೈನಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ. ಇದರಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಮುಖ್ಯವಾಗಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರು ಹಾಜರಿ ಹಾಕುವ ನಿರೀಕ್ಷೆ ಇದೆ. ಗೆಳೆಯನ ಸಿನಿಮಾಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಅವರಿಬ್ಬರು ಪ್ರೀಮಿಯರ್ ಶೋಗೆ ಬರಲು ತೀರ್ಮಾನಿಸಿದ್ದಾರಂತೆ.
ಟ್ರೇಲರ್ ಬಿಡುಗಡೆ ಆದಾಗ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಟ್ರೋಲ್ ಮಾಡಲಾಯಿತು. ಇದು ‘ಚಾಂಪಿಯನ್ಸ್’ ಸಿನಿಮಾದ ಕಾಪಿ ಎಂದು ಅನೇಕರು ಟೀಕೆ ಮಾಡಿದರು. ಆದರೆ ಇದು ಕಾಪಿ ಅಲ್ಲ, ಅಧಿಕೃತ ರಿಮೇಕ್ ಎಂದು ಚಿತ್ರತಂಡ ಹೇಳಿದೆ. ಅಲ್ಲದೇ, ರಿಮೇಕ್ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಆಮಿರ್ ಖಾನ್ ಅವರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಗಳು, ಸಹೋದರಿ ಮದುವೆ ಆಗಿದ್ದು ಹಿಂದೂಗಳನ್ನೇ; ಲವ್ ಜಿಹಾದ್ ಆರೋಪಕ್ಕೆ ಆಮಿರ್ ಖಾನ್ ಉತ್ತರ
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಬಾಸ್ಕೆಟ್ ಬಾಲ್ ಕೋಚ್ ಪಾತ್ರವನ್ನು ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಜೆನಿಲಿಯಾ ದೇಶಮುಖ್ ನಟಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಸುಧಾ ಮೂರ್ತಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರೀಮಿಯರ್ ಶೋಗೆ ಬರುವ ಸೆಲೆಬ್ರಿಟಿಗಳಿಗೂ ಸಿನಿಮಾ ಇಷ್ಟ ಆಗುತ್ತಾ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.