175 ಕೋಟಿ ರೂಪಾಯಿಗೆ ‘ಕಿಂಗ್’ ಸಿನಿಮಾದ ವಿದೇಶಿ ವಿತರಣಾ ಹಕ್ಕುಗಳು ಸೇಲ್

‘ಪಠಾನ್’ ಖ್ಯಾತಿಯ ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ಮಗಳು ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಜೈದೀಪ್ ಅಹ್ಲಾವತ್ ಹಾಗೂ ಅನಿಲ್ ಕಪೂರ್ ಮುಂತಾದ ತಾರೆಯರು ಬಣ್ಣ ಹಚ್ಚಿದ್ದಾರೆ.

175 ಕೋಟಿ ರೂಪಾಯಿಗೆ ‘ಕಿಂಗ್’ ಸಿನಿಮಾದ ವಿದೇಶಿ ವಿತರಣಾ ಹಕ್ಕುಗಳು ಸೇಲ್
Shah Rukh Khan

Updated on: Nov 01, 2026 | 2:02 PM

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ, ತೀವ್ರ ನಿರೀಕ್ಷೆ ಮೂಡಿಸಿರುವ ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಈ ಚಿತ್ರದ ವಿದೇಶಿ ವಿತರಣೆಯ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು, ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದೆ. ಬಾಲಿವುಡ್ ವರದಿಗಳ ಪ್ರಕಾರ, ಖ್ಯಾತ ವಿತರಣಾ ಸಂಸ್ಥೆಯಾದ ‘ಫಾರ್ಸ್ ಫಿಲ್ಮ್ಸ್’ ಈ ಸಿನಿಮಾದ ವಿದೇಶಿ ವಿತರಣಾ ಹಕ್ಕುಗಳನ್ನು ಬರೋಬ್ಬರಿ 175 ಕೋಟಿ ರೂಪಾಯಿಗೆ ಖರೀದಿಸಿದೆ.

ಆರಂಭದಲ್ಲಿ ‘ಕಿಂಗ್’ ಚಿತ್ರದ ವಿದೇಶಿ ವಿತರಣೆಯನ್ನು ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ವರದಿಯಾಗಿತ್ತು. ಆದರೆ ‘ಫಾರ್ಸ್ ಫಿಲ್ಮ್ಸ್’ ಸಂಸ್ಥೆಯು ನಿರ್ಮಾಪಕರಿಗೆ ನಿರಾಕರಿಸಲಾಗದ ಭಾರಿ ಆಫರ್ ನೀಡಿದ್ದರಿಂದ ಈ ಐತಿಹಾಸಿಕ ಒಪ್ಪಂದ ಕುದುರಿದೆ. ಇಲ್ಲಿಯವರೆಗೆ ಯಾವುದೇ ಭಾರತೀಯ ಸಿನಿಮಾದ ಸಾಗರೋತ್ತರ ಹಕ್ಕುಗಳು 100 ಕೋಟಿ ರೂಪಾಯಿಗೂ ಮಾರಾಟವಾಗಿರಲಿಲ್ಲ. ಇದೀಗ 175 ಕೋಟಿ ರೂ. ಬಾಚಿಕೊಳ್ಳುವ ಮೂಲಕ ‘ಕಿಂಗ್’ ಸಾರ್ವಕಾಲಿಕ ದಾಖಲೆ ಬರೆದಿದೆ.

ಈ ಒಪ್ಪಂದದ ಪ್ರಕಾರ, ‘ಫಾರ್ಸ್ ಫಿಲ್ಮ್ಸ್’ ಸಂಸ್ಥೆಯು ಮಧ್ಯಪ್ರಾಚ್ಯ ಮಾರುಕಟ್ಟೆಯನ್ನು ನೇರವಾಗಿ ನಿರ್ವಹಿಸಲಿದ್ದು, ಉತ್ತರ ಅಮೆರಿಕ ಮತ್ತು ಯುಕೆ ಸೇರಿದಂತೆ ಇತರ ದೇಶಗಳ ವಿತರಣಾ ಹಕ್ಕುಗಳನ್ನು ಪ್ರಾದೇಶಿಕ ಸಬ್-ಡಿಸ್ಟ್ರಿಬ್ಯೂಟರ್ಸ್‌ಗೆ ಮಾರಾಟ ಮಾಡಲಿದೆ. ವಿದೇಶಿ ಮಾರುಕಟ್ಟೆಯಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಈ ಭಾರಿ ಹೂಡಿಕೆಯನ್ನು ಮರಳಿ ಪಡೆಯಲು ‘ಕಿಂಗ್’ ಸಿನಿಮಾ ವಿದೇಶದಲ್ಲಿ ಅಂದಾಜು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಬೇಕಾಗಿದೆ. ಕ್ರಿಸ್ಮಸ್ ಹಬ್ಬದ ರಜಾದಿನಗಳಲ್ಲಿ ಈ ಸಿನಿಮಾ ತೆರೆಕಾಣುತ್ತಿದ್ದು, ಅದೇ ಸಮಯದಲ್ಲಿ ಹಾಲಿವುಡ್‌ನ ಬೃಹತ್ ಸಿನಿಮಾಗಳಾದ ‘ಅವೆಂಜರ್ಸ್: ಡೂಮ್ಸ್‌ಡೇ’, ‘ಡ್ಯೂನ್: ಪಾರ್ಟ್ 3’ ಮತ್ತು ‘ಜುಮಾಂಜಿ’ ಚಿತ್ರಗಳು ಪೈಪೋಟಿಗೆ ಇಳಿಯುತ್ತಿರುವುದರಿಂದ ಇದು ಸುಲಭದ ಸವಾಲಾಗಿರುವುದಿಲ್ಲ.

ಇದನ್ನೂ ಓದಿ: ‘ನಾನು ಕೊಲೆಗಾರನಲ್ಲ, ಪ್ರೇಮಿ’; ಗಮನಸೆಳೆದ ಶಾರುಖ್ ‘ಕಿಂಗ್’ ಹೊಸ ಪೋಸ್ಟರ್

ಶಾರುಖ್ ಖಾನ್ ಅವರಿಗೆ ವಿದೇಶಗಳಲ್ಲಿ ಇರುವ ಭಾರಿ ಕ್ರೇಜ್ ಅನ್ನು ಈ ಬ್ಯುಸಿನೆಸ್ ಡೀಲ್ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಮಧ್ಯೆ, ನವೆಂಬರ್ 2ರಂದು ಶಾರುಖ್ ಖಾನ್ ಅವರ 61ನೇ ಜನ್ಮದಿನದ ಅಂಗವಾಗಿ ‘ಕಿಂಗ್’ ಸಿನಿಮಾದಿಂದ ವಿಶೇಷ ಪ್ರಚಾರದ ಝಲಕ್ ಅಥವಾ ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರವು ಡಿಸೆಂಬರ್ 24ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us