
ಬಹುನಿರೀಕ್ಷಿತ ‘ಪಠಾಣ್’ (Pathaan Movie) ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ಕ್ರೇಜ್ ಜೋರಾಗಿದೆ. ಟೀಸರ್ ಮತ್ತು ಹಾಡಿನ ಮೂಲಕ ಈ ಚಿತ್ರ ಹೈಪ್ ಸೃಷ್ಟಿ ಮಾಡಿದೆ. ದೊಡ್ಡ ಗ್ಯಾಪ್ ಬಳಿಕ ಶಾರುಖ್ ಖಾನ್ (Shah Rukh Khan) ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿರುವುದರಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ. ಒಂದೆಡೆ ಅಭಿಮಾನಿಗಳು ‘ಪಠಾಣ್’ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇದರ ಬಾಕ್ಸ್ ಆಫೀಸ್ (Pathaan Movie Box Office Collection) ಭವಿಷ್ಯ ಏನಾಗಬಹುದು ಎಂದು ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಇದೇ ಪ್ರಶ್ನೆಯನ್ನು ಅಭಿಮಾನಿಯೊಬ್ಬರು ಶಾರುಖ್ ಖಾನ್ಗೆ ನೇರವಾಗಿ ಕೇಳಿದ್ದಾರೆ. ಅದಕ್ಕೆ ಶಾರುಖ್ ಖಾನ್ ಅವರ ಜಾಣತನದ ಉತ್ತರ ನೀಡಿದ್ದಾರೆ.
ಸಿನಿಮಾ ಪ್ರಚಾರದ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ಅವರು ಅಭಿಮಾನಿಗಳ ಜೊತೆ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಫ್ಯಾನ್ಸ್ ಬಗೆಬಗೆಯ ಪ್ರಶ್ನೆ ಎಸೆದಿದ್ದಾರೆ. ‘ಪಠಾಣ್ ಸಿನಿಮಾ ಮೊದಲು ದಿನ ಎಷ್ಟು ಕಲೆಕ್ಷನ್ ಮಾಡಬಹುದು’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಶಾರುಖ್ ಖಾನ್, ‘ಊಹಿಸುವ ಕೆಲಸ ನನ್ನದಲ್ಲ. ನಿಮ್ಮನ್ನು ರಂಜಿಸುವುದು ಮತ್ತು ನಗಿಸುವುದು ಮಾತ್ರ ನನ್ನ ಕೆಲಸ’ ಎಂದು ಹೇಳಿದ್ದಾರೆ.
2023ರ ಜನವರಿ 25ರಂದು ‘ಪಠಾಣ್’ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ‘ಯಶ್ ರಾಜ್ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಕೂಡ ನಟಿಸಿದ್ದು, ಸ್ಟಾರ್ ಮೆರುಗು ಹೆಚ್ಚಿದೆ. ಅದ್ದೂರಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾವನ್ನು ವಿವಿಧ ದೇಶಗಳಲ್ಲಿ ಚಿತ್ರಿಸಲಾಗಿದೆ.
ಇದನ್ನೂ ಓದಿ: Prakash Raj: ‘ಬೇಷರಂ ರಂಗ್’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್ ರಾಜ್
ಇತ್ತೀಚೆಗೆ ಈ ಸಿನಿಮಾದ ‘ಬೇಷರಂ ರಂಗ್..’ ಹಾಡು ಬಿಡುಗಡೆ ಆಯಿತು. ಇದರಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆ ಎಂಬ ಕಾರಣಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂಬ ಅಭಿಯಾನ ಕೂಡ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ Boycott Pathaan ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಇದನ್ನೂ ಓದಿ: Vivek Agnihotri: ಶಾರುಖ್ ನಟನೆಯ ‘ಬೇಷರಂ ರಂಗ್’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ
ಕೊಂಕು ನುಡಿದವರಿಗೆ ಶಾರುಖ್ ಖಾನ್ ತಿರುಗೇಟು:
ಡಿ.15ರಂದು ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆಗೊಂಡಿತು. ಈ ವೇದಿಕೆಯಲ್ಲಿ ಶಾರುಖ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ‘ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.