ಬಾಲಿವುಡ್ನಲ್ಲಿ ಈಗಾಗಲೇ ಅನೇಕ ಮಲ್ಟಿಸ್ಟಾರ್ ಸಿನಿಮಾಗಳು ಬಂದಿವೆ. ಪ್ರೇಕ್ಷಕರು ಆ ರೀತಿಯ ಇನ್ನಷ್ಟು ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ. ಆ ನಿರೀಕ್ಷೆಯನ್ನು ಡಬಲ್ ಮಾಡುವಂತಹ ಕೆಲವು ಅಂತೆ-ಕಂತೆಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಹಿಂದಿ ಚಿತ್ರರಂಗದಲ್ಲಿ ನಟ ಸಲ್ಮಾನ್ ಖಾನ್ (Salman Khan) ಅವರು ತಮ್ಮದೇ ರೀತಿಯ ಛಾಪು ಮೂಡಿಸಿದ್ದಾರೆ. ಹಾಗೆಯೇ ಹೃತಿಕ್ ರೋಷನ್ (Hrithik Roshan) ಕೂಡ ಚಾರ್ಮ್ ಹೊಂದಿದ್ದಾರೆ. ಇನ್ನು, ಶಾರುಖ್ ಖಾನ್ (Shah Rukh Khan) ಅವರು ಸೋತರೂ ಅವರಿಗೆ ಇರುವ ಡಿಮ್ಯಾಂಡ್ ಕುಸಿದಿಲ್ಲ. ಈ ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಆ ಆಸೆ ಈಡೇರಿಸಲು ಬಾಲಿವುಡ್ನಲ್ಲಿ ಒಂದು ಸಿನಿಮಾ ತಯಾರಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ಕುರಿತಂತೆ ಅನೇಕ ಬಗೆಯ ಗಾಸಿಪ್ ಹರಡಿದೆ. ‘ವಾರ್ 2’ ಸಿನಿಮಾದಲ್ಲಿಯೇ ಈ ಮೂವರೂ ಸ್ಟಾರ್ ನಟರು ತೆರೆಹಂಚಿಕೊಳ್ಳುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಆದರೆ ಅದು ನಿಜವಲ್ಲ ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತಿದೆ.
ಶಾರುಖ್ ಖಾನ್ ಅವರು ಈಗ ‘ಪಠಾಣ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೃತಿಕ್ ರೋಷನ್ ಅವರು ಶೀಘ್ರದಲ್ಲೇ ‘ವಾರ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಅತ್ತ, ಸಲ್ಮಾನ್ ಖಾನ್ ಅವರು ‘ಟೈಗರ್ 3’ ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಸಲ್ಮಾನ್ ಖಾನ್ ಅವರ ಟೈಗರ್ ಪಾತ್ರ ಮತ್ತು ಶಾರುಖ್ ಅವರ ಪಠಾಣ್ ಪಾತ್ರ ‘ವಾರ್ 2’ ಸಿನಿಮಾದಲ್ಲಿ ಇರುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಹಾಗಾದರೆ ಬಾಲಿವುಡ್ ಮಂದಿಯ ಪ್ಲ್ಯಾನ್ ಏನು? ಆ ಬಗ್ಗೆಯೂ ಕೆಲವು ವಿವರಗಳು ಸಿಕ್ಕಿವೆ.
ಹೃತಿಕ್ ರೋಷನ್ ಅವರು ‘ವಾರ್ 2’ ಸಿನಿಮಾವನ್ನು ಬಿಡುಗಡೆ ಗೊಳಿಸಿದ ನಂತರವಷ್ಟೇ ಅಭಿಮಾನಿಗಳು ಬಯಸಿದಂತೆ ಮಲ್ಟಿಸ್ಟಾರ್ ಸಿನಿಮಾ ಸಿದ್ಧವಾಗಲಿದೆ. ಟೈಗರ್ (ಸಲ್ಮಾನ್), ಪಠಾಣ್ (ಶಾರುಖ್) ಹಾಗೂ ವಾರ್ ಸಿನಿಮಾದ ಕಬೀರ್ (ಹೃತಿಕ್) ಪಾತ್ರಗಳನ್ನು ಜೊತೆಯಾಗಿಸಿ ಒಂದು ಸ್ಪೈ ಥ್ರಿಲ್ಲರ್ ಸಿನಿಮಾ ಮಾಡಬೇಕು ಎಂದು ಸಿದ್ಧತೆ ನಡೆಯುತ್ತಿದೆ. ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ಗೆ ಜೋಡಿಯಾಗಿ ಕತ್ರಿನಾ ಕೈಫ್ ಮತ್ತು ಶಾರುಖ್ ಖಾನ್ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ಆದಿತ್ಯ ಚೋಪ್ರಾ ಅವರು ಈ ದೈತ್ಯ ಪ್ರಾಜೆಕ್ಟ್ಗೆ ಬಂಡವಾಳ ಹೂಡಲಿದ್ದಾರೆ. ಬಾಲಿವುಡ್ನ ಮೂವರು ಸೂಪರ್ ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಅದು ತುಂಬ ಮಹತ್ವದ್ದಾಗಿರಲಿದೆ. ಹಾಗಾಗಿ ಇದು ಹಾಲಿವುಡ್ನ ‘ಅವೆಂಜರ್ಸ್ ಎಂಡ್ಗೇಮ್’ ಸಿನಿಮಾ ರೀತಿಯ ಫೀಲ್ ನೀಡಲಿದೆ ಅಂತ ಮೂಲಗಳು ತಿಳಿಸಿವೆ ಎಂದು ಪಿಂಕ್ವಿಲ್ಲಾ ವೆಬ್ಸೈಟ್ ವರದಿ ಮಾಡಿದೆ.
ಇದನ್ನೂ ಓದಿ:
ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್ ಖಾನ್ ಮನೆಗೆ ನುಗ್ಗಿದ್ದ ಕಪಿಲ್ ಶರ್ಮಾ; ಮುಂದೇನಾಯ್ತು?
ಸಲ್ಮಾನ್ ಖಾನ್ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ