ನಟ ಶಾರುಖ್ ಖಾನ್ (Shah Rukh khan) ಅವರು ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. 3 ದಶಕಗಳ ವೃತ್ತಿಬದುಕಿನಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಶಾರುಖ್ ಖಾನ್ ಮತ್ತು ಅವರ ಕುಟುಂಬದವರು ಅನೇಕ ಕಷ್ಟಗಳನ್ನು ಎದುರಿಸಿದರು. ಆದರೆ 2023ರಲ್ಲಿ ಅವರು ಮತ್ತೆ ಏಳಿಗೆ ಕಂಡರು. ಅಲ್ಲದೇ ಅವರಿಗೆ ಈಗ ‘ವರ್ಷದ ಭಾರತೀಯ 2023’ (Indian of The Year 2023) ಪ್ರಶಸ್ತಿ ಕೂಡ ಸಿಕ್ಕಿದೆ. ಈ ಪ್ರಶಸ್ತಿಯನ್ನು ಅವರು ಬಹಳ ಖುಷಿಯಿಂದ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಅನೇಕ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
‘ಕಳೆದ ಕೆಲವು ವರ್ಷಗಳಲ್ಲಿ ನನಗೆ ಮತ್ತು ನನ್ನ ಕುಟುಂಬದವರಿಗೆ ಕಷ್ಟ ಎದುರಾಯಿತು. ನನ್ನ ಹಲವು ಸಿನಿಮಾಗಳು ಫ್ಲಾಪ್ ಆದವು. ಕೆಲವರು ನನ್ನ ಬದುಕು ಅಂತ್ಯವಾಯ್ತು ಎನ್ನಲು ಆರಂಭಿಸಿದರು. ವೈಯಕ್ತಿಕ ಬದುಕಿನಲ್ಲೂ ಅನೇಕ ಘಟನೆಗಳು ನಡೆದವು. ಅದರಿಂದ ನಾನು ಪಾಠ ಕಲಿತೆ. ಶಾಂತವಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದನ್ನು ಕಲಿತೆ. ಎಲ್ಲವೂ ಸರಿ ಇದೆ ಎನ್ನುವಾಗ ಏನಾದರೂ ಬಂದು ಬಡಿಯಬಹುದು. ಆದರೆ ಈ ಸಂದರ್ಭದಲ್ಲಿ ನೀವು ಭರವಸೆ ಉಳಿಸಿಕೊಳ್ಳಬೇಕು’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
‘100 ಪರ್ಸೆಂಟ್ ಎಂಬುದು ಕಥೆಯ ಅಂತ್ಯವಲ್ಲ. ಸಿನಿಮಾದ ರೀತಿ ಜೀವನದ ಅಂತ್ಯದಲ್ಲೂ ಕೂಡ ಎಲ್ಲವೂ ಸರಿ ಆಗುತ್ತದೆ ಅಂತ ನನಗೆ ಯಾರೋ ಹೇಳಿದ್ದರು. ಸರಿ ಆಗಿಲ್ಲ ಎಂದರೆ ಅಂತ್ಯ ಆಗಿಲ್ಲ ಎಂದು ಅರ್ಥ. ಪಿಕ್ಚರ್ ಇನ್ನೂ ಬಾಕಿ ಇದೆ ಮೇರೆ ದೋಸ್ತ್. ಆ ಮಾತಿನ ಮೇಲೆ ನನಗೆ ನಂಬಿಕೆ ಇದೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ. 2023ರಲ್ಲಿ ಅವರು ‘ಜವಾನ್’, ‘ಪಠಾಣ್’, ‘ಡಂಕಿ’ ಸಿನಿಮಾಗಳ ಮೂಲಕ ಗೆಲುವ ಕಂಡಿದ್ದಾರೆ.
ಇದನ್ನೂ ಓದಿ: ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಶಾರುಖ್ಗೆ ಹ್ಯಾಟ್ರಿಕ್ ಗೆಲುವು
‘ಒಂದಷ್ಟು ವರ್ಷಗಳ ಹಿಂದೆ ಪ್ರಶಸ್ತಿ ಪಡೆದಾಗ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ನೀಡುತ್ತಿದ್ದೆ. ಅದರಿಂದ ಅವರ ಬದುಕಿಗೆ ಪ್ರೋತ್ಸಾಹ ಸಿಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ನನ್ನ ಕುಟುಂಬಕ್ಕೆ ಈ ಪ್ರೋತ್ಸಾಹದ ಅಗತ್ಯವಿತ್ತು. ಹಾಗಾಗಿ ಅವರಿಗೋಸ್ಕರ ನಾನು ಈ ಪ್ರಶಸ್ತಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ