ದೀಪಿಕಾ ಪಡುಕೋಣೆಯಿಂದ ವೈರಲ್ ಆಗ್ತಿದೆ ಭೂತಾನ್ ರಾಷ್ಟ್ರೀಯ ಆಹಾರ, ಇದನ್ನು ಮಾಡುವುದು ಹೇಗೆ?
Deepika Padukone Food: ದೀಪಿಕಾ ಪಡುಕೋಣೆಯಿಂದಾಗಿ ಭೂತಾನ್ನ ರಾಷ್ಟ್ರೀಯ ಆಹಾರ ಖಾದ್ಯ ಏಕಾ-ಏಕಿ ವೈರಲ್ ಆಗುತ್ತಿದೆ. ಯಾವುದು ಆ ಆಹಾರ ಖಾದ್ಯ? ಅದನ್ನು ತಯಾರಿಸುವುದು ಹೇಗೆ? ಇಲ್ಲಿದೆ ವಿವರ. ಎಮಾ ದಟ್ಶಿ
ನಟಿ ದೀಪಿಕಾ ಪಡುಕೋಣೆ (Deepika Padukone) ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ. ಹಲವು ಫ್ಯಾಷನ್ ಬ್ರ್ಯಾಂಡ್ಗಳು, ಕಾರು, ವಿಮೆ, ಬ್ಯಾಂಕ್ ಇನ್ನೂ ಹಲವಾರು ಉತ್ಪನ್ನ, ಸೇವೆಗಳಿಗೆ ದೀಪಿಕಾ ಪಡುಕೋಣೆ ರಾಯಭಾರಿ ಆಗಿದ್ದು ಜಾಹೀರಾತುಗಳನ್ನು ನೀಡುತ್ತಾರೆ. ದೀಪಿಕಾ ಪಡುಕೋಣೆ, ಉತ್ಪನ್ನವೊಂದರ ಪ್ರಚಾರ ಮಾಡಲು ಕೋಟ್ಯಂತರ ರೂಪಾಯಿ ಹಣ ಪಡೆಯುತ್ತಾರೆ. ಆದರೆ ಇದೀಗ ನೆರೆಯ ಭೂತಾನ್ ದೇಶದ ರಾಷ್ಟ್ರೀಯ ಆಹಾರ ಖಾದ್ಯ ದೀಪಿಕಾ ಪಡುಕೋಣೆಯಿಂದಾಗಿ ಸಖತ್ ವೈರಲ್ ಆಗುತ್ತಿದೆ. ಪರೋಕ್ಷವಾಗಿ ಭೂತಾನ್ರ ಆಹಾರ ಖಾದ್ಯಕ್ಕೆ ಸಖತ್ ಪ್ರಚಾರ ನೀಡಿದ್ದಾರೆ ದೀಪಿಕಾ ಪಡುಕೋಣೆ.
2023ರ ಏಪ್ರಿಲ್ ತಿಂಗಳಲ್ಲಿ ದೀಪಿಕಾ ಪಡುಕೋಣೆ ಭೂತಾನ್ಗೆ ಹೋಗಿದ್ದರು. ಅಲ್ಲಿನ ಕೆಲವು ಚಿತ್ರಗಳನ್ನು ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಭೂತಾನ್ನ ಕೆಲವು ಆಹಾರ ಖಾದ್ಯಗಳ ಚಿತ್ರಗಳನ್ನೂ ಸಹ ಅವರು ಆಗ ಹಂಚಿಕೊಂಡಿದ್ದರು. ಇದೀಗ ಕೆಲವು ದಿನಗಳ ಹಿಂದೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಮತ್ತೆ ಭೂತಾನ್ ಬಗ್ಗೆ ಅಲ್ಲಿನ ಒಂದು ಆಹಾರ ಖಾದ್ಯದ ಬಗ್ಗೆ ಮಾತನಾಡಿದ್ದಾರೆ.
ದೀಪಿಕಾ ಪಡುಕೋಣೆ ತಮಗೆ ಭೂತಾನ್ನ ಎಮಾ ದಟ್ಶಿ ಎಂದರೆ ಬಹಳ ಇಷ್ಟವೆಂದು, ಆ ಖಾದ್ಯ ನನ್ನ ಮನಸ್ಸು ಗೆದ್ದು ಬಿಟ್ಟಿದೆ ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ. ದೀಪಿಕಾ ಇಷ್ಟು ಹೇಳಿದ್ದೆ ತಡ ದೀಪಿಕಾ ಅಭಿಮಾನಿಗಳು, ಭಾರತದ ಆಹಾರ ಪ್ರಿಯರು ಏನದು ‘ಎಮಾ ದಟ್ಶಿ’ ಎಂದು ಹುಡುಕಾಟ ಆರಂಭ ಮಾಡಿದ್ದು ಮಾತ್ರವಲ್ಲದೆ ಮನೆಗಳಲ್ಲಿ ಎಮಾ ದಟ್ಶಿಯನ್ನು ತಯಾರಿಸಿ ಅದರ ವಿಡಿಯೋಗಳನ್ನು ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದಾರೆ.
ಇದನ್ನೂ ಓದಿ:ಶೀಘ್ರವೇ ತಾಯಿ ಆಗಲಿದ್ದಾರೆ ದೀಪಿಕಾ ಪಡುಕೋಣೆ; ಹಿಂಟ್ ಕೊಟ್ಟ ನಟಿ
ದೀಪಿಕಾ ಪಡುಕೋಣೆಗೆ ಬಲು ಇಷ್ಟವಾಗಿರುವ ‘ಎಮಾ ದಟ್ಶಿ’ ಭೂತಾನ್ರ ರಾಷ್ಟ್ರೀಯ ಆಹಾರ ಖಾದ್ಯ. ಎಮಾ ಎಂದರೆ ಭೂತಾನ್ನಲ್ಲಿ ಮೆಣಸಿನಕಾಯಿ, ದಾಟ್ಶಿ ಎಂದರೆ ಚೀಸ್ ಎಂದರ್ಥ. ಈ ಖಾದ್ಯದ ತಯಾರಿಯಲ್ಲಿ ಬಳಕೆಯಾಗುವ ಎರಡು ಪ್ರಮುಖ ಸಾಮಗ್ರಿಗಳ ಹೆಸರನ್ನೇ ಈ ಖಾದ್ಯಕ್ಕೆ ಇಡಲಾಗಿದೆ.
ಈ ಖಾದ್ಯವನ್ನು ತಯಾರಿಸುವುದು ಬಹಳ ಸರಳ, ಸಾಕಷ್ಟು ಮೆಣಸಿನಕಾಯಿಗಳನ್ನು ತೆಗೆದುಕೊಳ್ಳಬೇಕು, ಅವನ್ನು ಉದ್ದುದ್ದ ಸೀಳಬೇಕು, ಒಂದು ಈರುಳ್ಳಿ, ಅರ್ಧ ಟಮೆಟೋ, ಕೆಲವು ಬೆಳ್ಳುಳ್ಳಿಯನ್ನು ಹೆಚ್ಚಿ ಒಟ್ಟಿಗೆ ಎಣ್ಣೆಯಲ್ಲಿ ಹುರಿದು ಬಳಿಕ ಅದಕ್ಕೆ ನೀರು ಹಾಕಿ ಕೆಲ ಕಾಲ ಸಣ್ಣನೆ ಉರಿಯಲ್ಲಿ ಕುದಿಸಬೇಕು. ಬಳಿಕ ಅದಕ್ಕೆ ಬೆಣ್ಣೆ ತುಸು ಹಾಕಿ, ಆ ಬಳಿಕ ಚೀಸ್ ಅನ್ನು ಹಾಕಿ ಚೆನ್ನಾಗಿ ಸ್ಪೂನ್ನಿಂದ ಬಾಡಿಸಬೇಕು ಅಲ್ಲಿಗೆ ‘ಎಮಾ ದಟ್ಶಿ’ ರೆಡಿ. ಇದನ್ನು ಕೆಂಪು ಅನ್ನದೊಂದಿಗೆ ಅಥವಾ ಭೂತಾನ್ನ ಮತ್ತೊಂದು ವಿಶೇಷ ಖಾದ್ಯ ಟಿಂಗ್ಮೋ ಜೊತೆಗೆ ತಿನ್ನಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Wed, 10 January 24