ಮಾಲ್ಡೀವ್ಸ್‌ನಲ್ಲಿ ಚಿತ್ರೀಕರಣ ಬೇಡ, ನಿರ್ಮಾಪಕರಿಗೆ ಮನವಿ
Maldives: ಮಾಲ್ಡೀವ್ಸ್ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದೆ. ಮಾಲ್ಡೀವ್ಸ್ನ ಮೂವರು ಸಚಿವರು ಭಾರತದ ಪ್ರಧಾನಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಭಾರತೀಯರು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದ್ದು, ಸಿನಿಮಾ ಮಂದಿಯೂ ಇದಕ್ಕೆ ಬೆಂಬಲ ನೀಡಿದ್ದಾರೆ.
ಮಾಲ್ಡಿವ್ಸ್ (Maldives) ಜೊತೆಗೆ ಭಾರತದ ರಾಜತಾಂತ್ರಿಕ ಸಂಬಂಧ ಹಳಸಿದೆ. ಕೆಲ ದಿನಗಳ ಹಿಂದಷ್ಟೆ ಭಾರತದ ಪ್ರಧಾನಿಯವರ ಬಗ್ಗೆ ಮಾಲ್ಡೀವ್ಸ್ನ ಮೂವರು ಸಚಿವರು ಅವಹೇಳನಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ನ ಈ ಭಾರತ ವಿರೋಧಿ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ‘ಬಾಯ್ಕಾಟ್ ಮಾಲ್ಡೀವ್ಸ್’ ಟ್ರೆಂಡ್ ಆಗುತ್ತಿದೆ. ಭಾರತೀಯರು ಮಾಲ್ಡೀವ್ಸ್ಗೆ ಬದಲಾಗಿ ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಬಳಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಾಲಿವುಡ್ಡಿಗರಿಗಂತೂ ಮಾಲ್ಡೀವ್ಸ್ ಅತ್ಯಂತ ಮೆಚ್ಚಿನ ತಾಣ ಶೂಟಿಂಗ್ ಆಗಲಿ ವಿಶ್ರಾಂತಿಗಾಗಲಿ ಮಾಲ್ಡೀವ್ಸ್ಗೆ ತೆರಳುತ್ತಾರೆ. ಆದರೆ ಈಗ ಬಾಲಿವುಡ್ ಸಹ ‘ಬಾಯ್ಕಾಟ್ ಮಾಲ್ಡೀವ್ಸ್’ಗೆ ಬೆಂಬಲ ಸೂಚಿಸುತ್ತಿದೆ.
ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಕೆಲವು ಬಾಲಿವುಡ್ನ ನಟ-ನಟಿಯರು ಮಾಲ್ಡೀವ್ಸ್ ವಿರುದ್ಧ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ ಸಂಸ್ಥೆಯು ನಿರ್ಮಾಣ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ಇನ್ನು ಮುಂದೆ ಮಾಲ್ಡೀವ್ಸ್‌ನಲ್ಲಿ ಯಾವುದೇ ಬಾಲಿವುಡ್ ಸಿನಿಮಾದ ಚಿತ್ರೀಕರಣ ಮಾಡದಂತೆ ಮನವಿ ಮಾಡಿದ್ದಾರೆ.
ಚಿತ್ರರಂಗದ ಹಳೆಯ ಹಾಗೂ ಬೃಹತ್ ಸಂಸ್ಥೆಯಾಗಿರುವ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ (ಎಫ್ಡಬ್ಲುಐಸಿಇ) ಮಾಲ್ಡಿವ್ಸ್ ಸಚಿವರು ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಆಡಿರುವ ಮಾತುಗಳನ್ನು ಖಂಡಿಸಿದ್ದು, ಬಾಲಿವುಡ್ನ ನಿರ್ಮಾಪಕರು ಮಾಲ್ಡಿವ್ಸ್ನಲ್ಲಿ ತಮ್ಮ ಸಿನಿಮಾಗಳ ಚಿತ್ರೀಕರಣ ಮಾಡುವುದನ್ನು ನಿಲ್ಲಿಸಬೇಕು, ಈಗಾಗಲೇ ಚಿತ್ರೀಕರಣ ಮಾಡಲು ಮಾಡಿಕೊಂಡಿರುವ ಬುಕಿಂಗ್ಗಳನ್ನು ರದ್ದು ಮಾಡಬೇಕು ಎಂದು ಕೋರಿದೆ.
ಇದನ್ನೂ ಓದಿ:ನಮ್ಮಲ್ಲಿಗೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿ: ಚೀನಾಕ್ಕೆ ಮಾಲ್ಡೀವ್ಸ್ ಅಧ್ಯಕ್ಷರ ಮನವಿ
ಮಾಲ್ಡೀವ್ಸ್‌ನಲ್ಲಿ ಯಾವುದೇ ಶೂಟಿಂಗ್ ಅಥವಾ ಉತ್ಪಾದನಾ ಚಟುವಟಿಕೆಗಳನ್ನು ಯೋಜಿಸದಂತೆ ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ನಿರ್ಮಾಪಕರಿಗೆ ಈ ಮೂಲಕ ಸೂಚಿಸಲಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ಮತ್ತು ನಮ್ಮ ರಾಷ್ಟ್ರಕ್ಕೆ ಬಲವಾದ ಬೆಂಬಲವನ್ನು ನೀಡುವ ಸಲುವಾಗಿ ಈ ಗಟ್ಟಿ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ ಎಫ್ಡಬ್ಲುಐಸಿಇ.
ಕೆಲವು ದಿನಗಳ ಹಿಂದಷ್ಟೆ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಆ ಬಳಕ ಮಾಲ್ಡೀವ್ಸ್ ಬದಲಿಗೆ ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಬಳಸುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡಲು ಆರಂಭವಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ