ನಟ ಶಾರುಖ್ ಖಾನ್ (Shah Rukh Khan) ಹಾಗೂ ತಾಪ್ಸಿ ಪನ್ನು ಅವರು ಜೋಡಿಯಾಗಿ ನಟಿಸಿರುವ ‘ಡಂಕಿ’ (Dunki) ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 21ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಡಬಲ್ ಆಗಿದೆ. ಈಗ ‘ಡಂಕಿ’ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಯು/ಎ ಪ್ರಮಾಣಪತ್ರ (UA Certificate) ಪಡೆದುಕೊಂಡಿದೆ. ಅಲ್ಲದೇ, ಸಿನಿಮಾದ ಅವಧಿ 2 ಗಂಟೆ 41 ನಿಮಿಷ ಇದೆ ಎಂಬುದು ಕೂಡ ತಿಳಿದುಬಂದಿದೆ.
ಯು/ಎ ಪ್ರಮಾಣ ಪತ್ರ ಸಿಕ್ಕರೆ ಚಿತ್ರಕ್ಕೆ ತುಂಬ ಅನುಕೂಲ ಆಗುತ್ತದೆ. 18 ವರ್ಷಕ್ಕಿಂತ ಕಿರಿಯ ಪ್ರೇಕ್ಷಕರು ಕೂಡ ಪಾಲಕರ ಜೊತೆ ಬಂದು ಈ ಸಿನಿಮಾವನ್ನು ನೋಡಬಹುದು. ಹಾಗಾಗಿ ಮಕ್ಕಳೊಂದಿಗೆ ಬಂದು ‘ಡಂಕಿ’ ಸಿನಿಮಾವನ್ನು ವೀಕ್ಷಿಸಬೇಕು ಎಂದುಕೊಂಡ ಪ್ರೇಕ್ಷಕರಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಇದರಿಂದ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರ ಸೆಳೆದುಕೊಳ್ಳುತ್ತದೆ.
ಇದನ್ನೂ ಓದಿ: ‘ಡಂಕಿ’ ಚಿತ್ರದ ರಿಲೀಸ್ ಟೆನ್ಷನ್ ಮರೆತು ಮಾಲ್ಡೀವ್ಸ್ಗೆ ತೆರಳಿದ ತಾಪ್ಸಿ ಪನ್ನು
‘ಡಂಕಿ’ ಸಿನಿಮಾದಲ್ಲಿನ ಕೆಲವು ದೃಶ್ಯಗಳಿಗೆ ಸೆನ್ಸಾರ್ ಸದಸ್ಯರು ಬದಲಾವಣೆ ಸೂಚಿಸಿದ್ದಾರೆ. ಆತ್ಮಹತ್ಯೆಯ ದೃಶ್ಯ ಇರುವಲ್ಲಿ ‘ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ’ ಎಂಬ ಸೂಚನೆಯನ್ನು ನೀಡಲು ತಿಳಿಸಲಾಗಿದೆ. ಅಲ್ಲದೇ ಸಿನಿಮಾದ ಕೊನೆಯಲ್ಲಿ ತೋರಿಸಿದ ಕೆಲವು ವಿಷಯಗಳಿಗೆ ಪುರಾವೆ ಒದಗಿಸುವಂತೆ ಸೂಚಿಸಲಾಗಿದೆ. ಈ ಎಲ್ಲ ಸೂಚನೆಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ.
ಇದನ್ನೂ ಓದಿ: ‘ಜವಾನ್’, ‘ಪಠಾಣ್’ ರೀತಿಯೇ ‘ಡಂಕಿ’ ಕೂಡ ಹಿಟ್ ಆಗುತ್ತೆ ಎಂಬುದಕ್ಕೆ ಇಲ್ಲಿವೆ ಕಾರಣಗಳು..
ರಾಜ್ಕುಮಾರ್ ಹಿರಾನಿ ಅವರ ಸಿನಿಮಾದಲ್ಲಿ ಕಥೆಗೆ ಹೆಚ್ಚು ಮಹತ್ವ ನೀಡಲಾಗಿರುತ್ತದೆ. ಇದೇ ಮೊದಲ ಬಾರಿಗೆ ಅವರು ಶಾರುಖ್ ಖಾನ್ ಜೊತೆ ಕೈ ಜೋಡಿಸಿರುವುದರಿಂದ ಕೌತುಕ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಬೋಮನ್ ಇರಾನಿ, ವಿಕ್ಕಿ ಕೌಶಲ್ ಮುಂತಾದ ಕಲಾವಿದರು ಕೂಡ ನಟಿಸಿದ್ದಾರೆ. ವಲಸೆಯ ಕುರಿತ ಕಥೆ ‘ಡಂಕಿ’ ಚಿತ್ರದಲ್ಲಿ ಇದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.