ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ನಟನೆಯಿಂದ ಅಂತರ ಕಾಯ್ದುಕೊಂಡು ಕೆಲ ವರ್ಷಗಳು ಕಳೆದಿದ್ದವು. ಈಗ ಅವರು ಖ್ಯಾತ ನಿರ್ದೇಶಕರ ಜತೆ ಸಿನಿಮಾ ಮಾಡೋಕೆ ರೆಡಿ ಆಗಿದ್ದಾರೆ. ಅವರು ಚಿತ್ರೀಕರಣದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಅವರ ಮಗ ಆರ್ಯನ್ ಖಾನ್ ಕುಟುಂಬದ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್ಸಿಬಿ) ಆರ್ಯನ್ ಅವರನ್ನು ವಶಕ್ಕೆ ಪಡೆದಿದೆ. ಇದರಿಂದ ಶಾರುಖ್ ವಿಚಲಿತರಾಗಿದ್ದಾರೆ. ಅಲ್ಲದೆ, ಅವರು ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕಾರ್ಡಿಲಿಯಾ ಕ್ರೂಸ್ ಶಿಪ್ನಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಆರ್ಯನ್ ಖಾನ್ ಸೇರಿ ಸಾಕಷ್ಟು ಪ್ರತಿಷ್ಠಿತ ಕುಟುಂಬದ ಮಕ್ಕಳು ಈ ಪಾರ್ಟಿಗೆ ಹಾಜರಿ ಹಾಕಿದ್ದರು. ಈ ಪಾರ್ಟಿಗೆ ಎಂಟ್ರಿ ಫೀ 80 ಸಾವಿರ ರೂಪಾಯಿ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ರೇವ್ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಡಿಲಿಯಾ ಕ್ರೂಸ್ ಶಿಪ್ಮೇಲೆ ದಾಳಿ ನಡೆದಿದೆ. ಈ ವೇಳೆ ಆರ್ಯನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿಯವರೆಗೆ ಅವರ ಬಂಧನ ಆಗಿಲ್ಲ.
ಮಗನನ್ನು ಎನ್ಸಿಬಿ ಅವರು ವಶಕ್ಕೆ ಪಡೆಯುತ್ತಿದ್ದಂತೆ ಶಾರುಖ್ ಖಾನ್ಗೆ ಟೆನ್ಷನ್ ಶುರುವಾಗಿದೆ. ಶಾರುಖ್ ‘ಪಠಾಣ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿನ ಶೂಟಿಂಗ್ಗೆ ಅವರು ಸ್ಪೇನ್ಗೆ ತೆರಳಬೇಕಿತ್ತು. ಆದರೆ, ಮಗನ ಭವಿಷ್ಯದ ದೃಷ್ಟಿಯಿಂದ ಸ್ಪೇನ್ ಪ್ರವಾಸವನ್ನು ರದ್ದು ಮಾಡಿದ್ದಾರೆ.
ಶಾರುಖ್ ಮುಂಬೈನಲ್ಲಿ ಇದ್ದರೆ ಅವರೇ ಮುಂದೆನಿಂತು ಎಲ್ಲವನ್ನೂ ನೋಡಿಕೊಳ್ಳಬಹುದು. ಒಂದೊಮ್ಮೆ ಸ್ಪೇನ್ಗೆ ತೆರಳಿದರೆ ಅಲ್ಲಿಂದ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಇನ್ನು, ಆರ್ಯನ್ ವಿರುದ್ಧ ಡ್ರಗ್ ಕೇಸ್ ಬೀಳದಂತೆ ನೋಡಿಕೊಳ್ಳುವುದು ಶಾರುಖ್ಗೆ ತುಂಬಾನೇ ಮುಖ್ಯ. ಒಂದೊಮ್ಮೆ ಆರ್ಯನ್ ಪ್ರಕರಣ ದಾಖಲಾದರೆ, ಅವರ ವೃತ್ತಿ ಜೀವನಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣದಿಂದ ಶಾರುಖ್ ಮುಂಬೈನಲ್ಲೇ ಇದ್ದು, ಮಗನನ್ನು ಈ ಪ್ರಕರಣದಿಂದ ಹೊರ ತರಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಎನ್ಸಿಬಿ ಬಲೆಗೆ ಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ