
ಬಾಲಿವುಡ್ ನಟಿ ಶಮಿತಾ ಶೆಟ್ಟಿ ಅವರಿಗೆ ಈಗ 47 ವಯಸ್ಸು. ಅವರ ಅಕ್ಕ, ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗಾಗಲೇ 14 ವರ್ಷದ ಮಗನಿದ್ದರೂ, ಶಮಿತಾ ಮಾತ್ರ ಮದುವೆಯಾಗಲು ಯಾವುದೇ ಗಡಿಬಿಡಿ ಮಾಡಿಕೊಂಡಿಲ್ಲ. ಸಮಾಜ ಹೇಳುತ್ತದೆ ಎಂಬ ಕಾರಣಕ್ಕೆ ತಮಗೆ ಮದುವೆ ಆಗಲು ಇಷ್ಟವಿಲ್ಲ ಎಂಬುದನ್ನು ಅವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ. ಟ್ರೋಲರ್‌ಗಳಿಗೆ ಶಮಿತಾ ಈಗ ತಕ್ಕ ಶಾಸ್ತಿ ಮಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಮೆಂಟ್ ಒಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಶಮಿತಾ, ಟ್ರೋಲ್ ಮಾಡಿದ ವ್ಯಕ್ತಿಗೆ ಸುದೀರ್ಘವಾದ ಮತ್ತು ಖಡಕ್ ಆದ ಸಂದೇಶವೊಂದನ್ನು ಬರೆದಿದ್ದಾರೆ. ‘ನಿಮ್ಮ ಅದ್ಭುತವಾದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಲು ನಾನು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಿಮಗೆ ವಯಸ್ಸಾಗಿದೆ, ಹಳೇ ಕಳೆ ಈಗ ಉಳಿದಿಲ್ಲ ಎಂದು ನೀವು ಬರೆದಿದ್ದೀರಿ. ಹೌದು, ವಯಸ್ಸಾದಂತೆ ನಾನು ವಿಭಿನ್ನವಾಗಿ ಕಾಣುತ್ತಿರುವುದು ನಿಜ. ಸಮಯದೊಂದಿಗೆ ಎಲ್ಲವೂ ಬದಲಾಗುತ್ತದೆ. ಇದು ಪ್ರಕೃತಿಯ ನಿಯಮ. ದೈಹಿಕ ರೂಪ ಸೇರಿದಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ಫಿಟ್ ಆಗಿದ್ದೇನೆ ಮತ್ತು ಭಗವಂತ ನನಗೆ ನೀಡಿರುವ ಎಲ್ಲದಕ್ಕೂ ಕೃತಜ್ಞತೆಯಿಂದ ಸಂತೋಷವಾಗಿದ್ದೇನೆ. ನನಗೆ ಅಷ್ಟೇ ಸಾಕು,’ ಎಂದು ಶಮಿತಾ ಬರೆದಿದ್ದಾರೆ.
‘ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದರೆ ನಿಮ್ಮ ಮಕ್ಕಳು ಇಷ್ಟೊತ್ತಿಗೆ ದೊಡ್ಡವರಾಗುತ್ತಿದ್ದರು’ ಎಂಬ ಕಾಮೆಂಟ್‌ಗೆ ಉತ್ತರಿಸಿದ ಅವರು, ‘ಅದಕ್ಕೀಗೇನು? ನೀವು ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಹೇಳಿದ್ದೀರಿ. ಆದರೆ ಮದುವೆಯಾಗಿ ನೀವೇನು ಸಾಧಿಸಿದ್ದೀರಾ? ಎಲ್ಲದಕ್ಕಿಂತ ಮುಖ್ಯವಾಗಿ, ಒಂಟಿ ಮಹಿಳೆಯರನ್ನು ಈ ರೀತಿ ವಯಸ್ಸಿನ ಹೆಸರಿನಲ್ಲಿ ಅವಮಾನಿಸಲು ಮತ್ತು ನಿಮ್ಮ ಪಿತೃಪ್ರಧಾನ, ಹಳಸಲು ಆಲೋಚನೆಗಳನ್ನು ನಮ್ಮ ಮೇಲೆ ಹೇರಲು ನೀವು ನಮ್ಮನ್ನು ಏಕೆ ಫಾಲೋ ಮಾಡುತ್ತೀರಿ? ದಯವಿಟ್ಟು ನನಗೊಂದು ಉಪಕಾರ ಮಾಡಿ, ತಕ್ಷಣ ನನ್ನನ್ನು ಅನ್‌ಫಾಲೋ ಮಾಡಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.
2000ನೇ ಇಸವಿಯಲ್ಲಿ ಆದಿತ್ಯ ಚೋಪ್ರಾ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೊಹಬ್ಬತೇನ್’ ಮೂಲಕ ಶಮಿತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ತದನಂತರ ‘ಜೆಹರ್’, ‘ಫರೇಬ್’ ಮತ್ತು ‘ಕ್ಯಾಶ್’ ನಂತಹ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದು ಇಂಟೀರಿಯರ್ ಡಿಸೈನಿಂಗ್ ಕಡೆ ಗಮನ ಹರಿಸಿದ್ದ ಶಮಿತಾ, ನಂತರದ ದಿನಗಳಲ್ಲಿ ರಿಯಾಲಿಟಿ ಶೋಗಳ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್; ರಾಕೇಶ್ ಬಾಪಟ್ ಜತೆಗಿನ ಸಂಬಂಧ ಅಂತ್ಯ
‘ಝಲಕ್ ದಿಖ್ಲಾ ಜಾ 8’, ‘ಖತ್ರೋನ್ ಕೆ ಕಿಲಾಡಿ 9’, ‘ಬಿಗ್ ಬಾಸ್ ಒಟಿಟಿ’ ಮತ್ತು ‘ಬಿಗ್ ಬಾಸ್ 15’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಭಾರಿ ಜನಪ್ರಿಯತೆ ಗಳಿಸಿದರು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಸಹ-ಸ್ಪರ್ಧಿ ರಾಕೇಶ್ ಬಾಪಟ್ ಜೊತೆಗಿನ ಇವರ ಪ್ರೇಮಕಥೆ ಭಾರಿ ಸದ್ದು ಮಾಡಿತ್ತಾದರೂ, 2022ರಲ್ಲಿ ತಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರಾಗಿರುವುದಾಗಿ ಶಮಿತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.