ಸಾವಿಗೆ ಮುಂಚೆ ಆ ಇಂಜೆಕ್ಷನ್ ಪಡೆದಿದ್ದ ಶೆಫಾಲಿ, ಅದೇ ಕಾರಣವಾಯ್ತ?
Shefali Jariwala: ಖ್ಯಾತ ನಟಿ ಶೆಫಾಲಿ ಝರಿವಾಲ ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗುತ್ತಿದೆ. ಆದರೆ 42ರ ವಯಸ್ಸಿಗೆ ಹೃದಯಾಘಾತ ಬರಲು ಕಾರಣವೇನು? ಶೆಫಾಲಿ ನಿಧನ ಹೊಂದಿದ ದಿನ ಒಂದು ಇಂಜೆಕ್ಷನ್ ತೆಗೆದುಕೊಂಡಿದ್ದರು, ಆ ಇಂಜೆಕ್ಷನ್ ಅವರ ಸಾವಿಗೆ ಕಾರಣ ಆಗಿರಬಹುದು ಎನ್ನಲಾಗುತ್ತಿದೆ.

ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾ, ಕಿರುತೆರೆಯಲ್ಲಿಯೂ ಮಿಂಚಿದ್ದ ನಟಿ ಶಫಾಲಿ ಝರಿವಾಲ (shefali jariwala) ಜೂನ್ 27ರ ತಡರಾತ್ರಿ ನಿಧನ ಹೊಂದಿದ್ದಾರೆ. ಶೆಫಾಲಿ ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗಿತ್ತು. ಕೇವಲ 42 ವರ್ಷ ವಯಸ್ಸಿಗೆ ಅವರಿಗೆ ಒದಗಿಬಂದ ಹಠಾತ್ ಸಾವಿಗೆ ಚಿತ್ರರಂಗ ಮಾತ್ರವಲ್ಲದೆ ಸಿನಿಮಾ ಪ್ರೇಮಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಶೆಫಾಲಿ ನಿಧನದ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲವು ಮಹತ್ವದ ವಿಷಯಗಳು ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.
ಶೆಫಾಲಿ, ಶುಕ್ರವಾರ ರಾತ್ರಿ ನಿಧನ ಹೊಂದಿದ್ದು, ಆ ದಿನ ಅವರು ಕೆಲವು ಮಾತ್ರೆಗಳನ್ನು ತೆಗೆದುಕೊಂಡಿದ್ದರಂತೆ. ಅದೇ ದಿನ ಮಧ್ಯಾಹ್ನ ಅವರು ಆಂಟಿ ಏಜಿಂಗ್ ಡ್ರಗ್ (ವಯಸ್ಸು ಕಡಿಮೆ ಆಗಿರುವಂತೆ ಕಾಣಲು ನೀಡುವ ಔಷಧ) ಇಂಜೆಕ್ಷನ್ ಅನ್ನು ಸಹ ತೆಗೆದುಕೊಂಡಿದ್ದರಂತೆ. ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದಿರುವಂತೆ ಶೆಫಾಲಿ ಅವರು ಸುಂದರವಾಗಿ ಕಾಣಲು, ಚಿಕ್ಕವರಂತೆ ಕಾಣಲು ಕಳೆದ ಕೆಲ ವರ್ಷಗಳಿಂದಲೂ ಈ ಆಂಟಿ ಏಜಿಂಗ್ ಡ್ರಗ್ ಇಂಜೆಕ್ಷನ್ ಅನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಪರಿಣಿತರ ಬಳಿಯೇ ಈ ಚಿಕಿತ್ಸೆಯನ್ನು, ಇಂಜೆಕ್ಷನ್ ಅನ್ನು ಶೆಫಾಲಿ ಪಡೆಯುತ್ತಿದ್ದಾರಂತೆ.
ಆದರೆ ಶುಕ್ರವಾರದಂದು ಶೆಫಾಲಿ ಮನೆಯಲ್ಲಿ ಪೂಜೆ ಇದ್ದು, ಅಂದು ಅವರು ಉಪವಾಸ ಇದ್ದರಂತೆ. ಉಪವಾಸದಲ್ಲಿಯೇ ಇಂಜೆಕ್ಷನ್ ಮತ್ತು ಮಾತ್ರೆಗಳನ್ನು ತೆಗೆದುಕೊಂಡ ಕಾರಣದಿಂದ ಅವರಿಗೆ ಶುಗರ್ ಲೋ ಹಾಗೂ ಬಿಪಿ ಲೋ ಆಗಿ ಹೃದಯಾಘಾತ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕರೀನಾ ಕಪೂರ್ ಬಾತ್ರೂಂನಲ್ಲಿತ್ತು ಆ ಬಾಲಿವುಡ್ ಸ್ಟಾರ್ ನಟನ ಫೋಟೊ
ಮುಂಬೈನ ಓಶಿವಾರನಲ್ಲಿ ಪತಿಯೊಂದಿಗೆ ನೆಲೆಸಿದ್ದ ಶೆಫಾಲಿ ಶುಕ್ರವಾರದಂದು ರಾತ್ರಿ 10:30ಗೆ ಮನೆಗೆ ಬಂದರಂತೆ. ಅದಾದ ಕೆಲವೇ ಸಮಯದಲ್ಲಿ ಅವರಿಗೆ ಕೈ ಕಾಲು ನಡುಕ ಆರಂಭವಾಗಿದೆ. ಕೆಲವೇ ನಿಮಿಷದಲ್ಲಿ ಅವರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರ ಪತಿ ಶೆಫಾಲಿ ಅವರನ್ನು ಅಂಧೇರಿಯ ಬೆಲ್ಲೆವೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆ ವೇಳೆಗಾಗಲೇ ಶೆಫಾಲಿ ಜೀವ ಹೋಗಿತ್ತಂತೆ. ಬಳಿಕ ಮಾರನೇಯ ದಿನ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದೀಗ ಪೊಲೀಸರು, ಶೆಫಾಲಿಯ ಮನೆಯವರು, ವೈದ್ಯರ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಶೆಫಾಲಿ ತೆಗೆದುಕೊಳ್ಳುತ್ತಿದ್ದ ಔಷಧಿಗಳ ಸ್ಯಾಂಪಲ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಶನಿವಾರದಂತೆ ಶೆಫಾಲಿಯ ಅಂತ್ಯಕ್ರಿಯೆ ನಡೆದಿದೆ. ಶೆಫಾಲಿ ಕನ್ನಡದ ‘ಹುಡುಗರು’ ಸಿನಿಮಾದ ‘ಪಂಕಜ’ ಹಾಡಿನಲ್ಲಿ ನಟಿಸಿದ್ದರು. ಬಲು ಜನಪ್ರಿಯವಾಗಿದ್ದ ‘ಕಾಂಟಾ ಲಗಾ’ ಹಾಡಿನಲ್ಲಿರುವುದು ಸಹ ಇದೇ ಶೆಫಾಲಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sun, 29 June 25




