ನಟಿ ಶಿಲ್ಪಾ ಶೆಟ್ಟಿ (Shilap Shetty) ಇತ್ತೀಚೆಗೆ ಫ್ಯಾಮಿಲಿ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೀಗಾಗಿ, ಅವರು ಸಿನಿಮಾ ವಿಚಾರದಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ತಮ್ಮ ಪಾಲಿಗೆ ಬರುವ ಎಲ್ಲಾ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಪಾತ್ರ ಉತ್ತಮವಾಗಿದ್ದರೆ ಮಾತ್ರ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುತ್ತಾರೆ. ಈ ಬಾರಿ ಶಿಲ್ಪಾ ಶೆಟ್ಟಿ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರಕ್ಕೆ ‘ನಿಕಮ್ಮಾ’ (Nikamma trailer) ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ದೇವಿ ಹಾಗೂ ಸೂಪರ್ ವುಮನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು (ಮೇ 17) ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಈ ಸಿನಿಮಾದಲ್ಲಿ ಅಭಿಮನ್ಯು ದಸ್ಸಾನಿ ಹಾಗೂ ಶಿರ್ಲೆ ಸೇಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರದ್ದೂ ಕಾಲೇಜ್ ಲವ್ಸ್ಟೋರಿ. ಕಥಾನಾಯಕನ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಅವರ ಎಂಟ್ರಿ ಆಗುತ್ತದೆ. ನಂತರ ಏನೆಲ್ಲ ಆಗುತ್ತದೆ ಎಂಬುದೇ ಸಿನಿಮಾದ ಹೈಲೈಟ್ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ಒದಗಿಸಿದೆ. ‘ಕಂಬಕ್ತ್ ಇಷ್ಕ್’, ‘ಹೀರೋಪಂತಿ’, ‘ಭಾಗಿ’ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿ ಭೇಷ್ ಎನಿಸಿಕೊಂಡಿರುವ ಸಬ್ಬಿರ್ ಖಾನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡ ಶಿಲ್ಪಾ ಶೆಟ್ಟಿ; ನಟಿಗೆ ಬೇಸರ ತರಿಸಿದ್ದೇನು?
ಶಿರ್ಲೆ ಅವರು ಗಾಯಕಿ. ಅವರು ಈಗ ಚಿತ್ರರಂಗದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಗ್ಲಾಮರ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾ. ಅಭಿಮನ್ಯು ಅವರು ಈ ಮೊದಲು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಂತರ ನಟನೆಗೆ ಕಾಲಿಟ್ಟರು. ಅವರು ‘ನಿಕಮ್ಮಾ’ ಟ್ರೇಲರ್ನಲ್ಲಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ; ವೈರಲ್ ಆಗುತ್ತಿದೆ ವಿಡಿಯೋ
ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ಘೋಷಣೆ ಮಾಡಿದ್ದರು. ಹೊಸ ಅವತಾರ ಸಿಗುವವರೆಗೆ ಬ್ರೇಕ್ನಲ್ಲಿರುತ್ತೇನೆ ಎಂದಿದ್ದರು. ಈಗ ಅವರು ಹೊಸ ಗೆಟಪ್ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ. ಈ ಚಿತ್ರ ಜೂನ್ 17ರಂದು ತೆರೆಗೆ ಬರುತ್ತಿದೆ. ಸೋನಿ ಪಿಕ್ಚರ್ಸ್ ಹಾಗೂ ಶಬ್ಬಿರ್ ಖಾನ್ ಇಬ್ಬರೂ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:00 pm, Tue, 17 May 22