ಗಾಯಕ ಅದ್ನಾನ್ ಸಮಿ (Adnan Sami) ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಾಗೂ ವಿಡಿಯೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಮೊದಲು ಹಂಚಿಕೊಂಡಿದ್ದರು. ಆದರೆ, ಇವುಗಳನ್ನು ಈಗ ಅದ್ನಾನ್ ಸಮಿ ಡಿಲೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ‘ಗುಡ್ ಬೈ’ ಎಂಬ ಪೋಸ್ಟ್ ಹಾಕಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಈ ಪೋಸ್ಟ್ಗೆ ನಾನಾ ರೀತಿಯಲ್ಲಿ ಕಮೆಂಟ್ಗಳನ್ನು ಮಾಡಲಾಗುತ್ತಿದೆ. ಅವರು ಈ ರೀತಿ ಹಾಕಿರುವುದು ಏಕೆ ಎಂಬ ಪ್ರಶ್ನೆಗೆ ಅವರೇ ಉತ್ತರ ಹೇಳಬೇಕಿದೆ.
ಅದ್ನಾನ್ ಸಮಿ ಅವರು ಪಾಕಿಸ್ತಾನದವರು. ಭಾರತದಲ್ಲಿ ಅವರು ಹಲವು ವರ್ಷಗಳಿಂದ ನೆಲೆಸಿದ್ದಾರೆ. 2016ರಲ್ಲಿ ಅವರು ಭಾರತದ ಪೌರತ್ವ ಪಡೆದರು. ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಅದ್ನಾನ್ ಸಮಿ ಅವರು ಸಾಕಷ್ಟು ದೇಹ ತೂಕ ಹೊಂದಿದ್ದರು. ಒಂದು ವರದಿಯ ಪ್ರಕಾರ ಅವರು ವೃತ್ತಿ ಜೀವನ ಆರಂಭಿಸುವಾಗ ಅವರ ದೇಹದ ತೂಕ 230 ಕೆ.ಜಿ. ಇತ್ತು. ಆ ಬಳಿಕ ಜಿಮ್ನಲ್ಲಿ ವರ್ಕೌಟ್ ಮಾಡಿ ದೇಹ ತೂಕ ಇಳಿಸಿಕೊಂಡಿದ್ದಾರೆ. ಈಗ ಅವರು ಸಖತ್ ಫಿಟ್ ಆಗಿದ್ದಾರೆ. 2020ರಲ್ಲಿ ಅವರಿಗೆ ಪದ್ಮಶ್ರೀ ಅವಾರ್ಡ್ ಸಿಕ್ಕಿದೆ.
ಕಳೆದ ತಿಂಗಳು ಅದ್ನಾನ್ ಸಮಿ ಮಾಲ್ಡೀವ್ಸ್ಗೆ ತೆರಳಿದ್ದರು. ಈ ವೇಳೆ ಅವರು ತಮ್ಮ ಫೋಟೋ ಹಂಚಿಕೊಂಡಿದ್ದರು. ಅವರ ಬಾಡಿ ಟ್ರಾನ್ಸ್ಫಾರ್ಮೇಷನ್ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದರು. ಹೀಗಿರುವಾಗಲೇ ಅದ್ನಾನ್ ಸಮಿ ‘ಅಲ್ವಿದಾ’ (ಗುಡ್ ಬೈ) ಎಂದು ಪೋಸ್ಟ್ ಹಾಕಿದ್ದಾರೆ. ಈ ರೀತಿ ಗುಡ್ ಬೈ ಹೇಳಿರುವುದು ಏಕೆ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಿದೆ. ಫ್ಯಾನ್ಸ್ ವಲಯದಲ್ಲಿ ಈ ಬಗ್ಗೆ ಆತಂಕ ಮೂಡಿದೆ. ಅವರು ಇನ್ಸ್ಟಾಗ್ರಾಮ್ ತೊರೆಯುತ್ತಿರುವುದಕ್ಕೆ ಈ ರೀತಿ ಹಾಕಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಇನ್ನೂ ಕೆಲವರು ಇದನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದು, ಅದ್ನಾನ್ ಸಮಿ ಅವರು ಹೊಸ ಆರಂಭ ಮಾಡುತ್ತಿದ್ದು, ಹೀಗಾಗಿ ಈ ರೀತಿ ಪೋಸ್ಟ್ ಹಾಕಿದ್ದಾರೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅದ್ನಾನ್ ಸಮಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು 6.7 ಲಕ್ಷ ಜನರು ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಿಸುತ್ತಿದ್ದಾರೆ. ಅದ್ನಾನ್ ಸಮಿ ಪೋಸ್ಟ್ನಿಂದ ಅವರ ಹಿಂಬಾಲಕರಿಗೆ ತೀವ್ರ ಬೇಸರ ಆಗಿದೆ. ಅವರು ಈ ಬಗ್ಗೆ ಆದಷ್ಟು ಬೇಗ ಸ್ಪಷ್ಟನೆ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.