ಸೋನಾಕ್ಷಿ ಸಿನ್ಹಾ (Sonakshi Sinha) ಅವರಿಗೆ ಇತ್ತೀಚೆಗೆ ನಟನೆಯಲ್ಲಿ ಅಷ್ಟಾಗಿ ಯಶಸ್ಸು ಸಿಗುತ್ತಿಲ್ಲ. ಸ್ಟಾರ್ ಕಿಡ್ ಆದರೂ ಅವರಿಗೆ ಹೇಳಿಕೊಳ್ಳುವಂಥ ಆಫರ್ಗಳು ಬರುತ್ತಿಲ್ಲ. ಈ ಮಧ್ಯೆ ಅವರು ವಿವಾದದ ಮೂಲಕವೂ ಸುದ್ದಿಯಾಗಿದ್ದರು. ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ (Arrest Warrant) ಜಾರಿ ಮಾಡಲಾಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಈ ಬಗ್ಗೆ ಸೋನಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ನಕಲಿ ಎಂದು ಹೇಳಿರುವ ಸೋನಾಕ್ಷಿ, ಆರೋಪ ಮಾಡಿರುವ ವ್ಯಕ್ತಿ ಜನಪ್ರಿಯತೆ ಪಡೆದುಕೊಳ್ಳೋಕೆ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ ಸೋನಾಕ್ಷಿ ಸಿನ್ಹಾ.
ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಆಯೋಜಕರಿಂದ 37 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಸೋನಾಕ್ಷಿ ಸಿನ್ಹಾ ಅವರು ನಂತರ ಆ ಕಾರ್ಯಕ್ರಮಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದರು ಎನ್ನಲಾಗಿತ್ತು. ಮುಂಗಡವಾಗಿ ಪಡೆದಿದ್ದ ಹಣವನ್ನು ವಾಪಸ್ ನೀಡಲು ಕೂಡ ಅವರು ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ನಟಿಯಿಂದ ವಂಚನೆ ಆಗಿದೆ ಎಂದು ಆರೋಪಿಸಿ ಕಾರ್ಯಕ್ರಮದ ಆಯೋಜಕ ಪ್ರಮೋದ್ ಶರ್ಮಾ ಎಂಬುವವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ ಎಂದು ವರದಿ ಆಗಿತ್ತು.
‘ನನ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸುಳ್ಳು. ನನಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿರುವ ದುಷ್ಟ ವ್ಯಕ್ತಿಯ ಕೆಲಸ ಇದು. ಪತ್ರಕರ್ತರು ಈ ನಕಲಿ ಸುದ್ದಿಯನ್ನು ಪ್ರಕಟಿಸಬೇಡಿ. ಪ್ರಚಾರ ಪಡೆಯಲು ಆ ವ್ಯಕ್ತಿ ಮಾಡುತ್ತಿರುವ ಕುತಂತ್ರ ಇದು’ ಎಂದು ಸೋನಾಕ್ಷಿ ಹೇಳಿದ್ದಾರೆ.
‘ಆ ವ್ಯಕ್ತಿ ಇಂತಹ ದುರುದ್ದೇಶಪೂರಿತ ಲೇಖನಗಳನ್ನು ಹಾಕಿಸುವ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ದಯವಿಟ್ಟು ಈ ಕಿರುಕುಳ ನೀಡುವ ದಂಧೆಯಲ್ಲಿ ಪಾಲ್ಗೊಳ್ಳಬೇಡಿ. ನನ್ನ ಕಾನೂನು ತಂಡವು ಅವರ ವಿರುದ್ಧ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನನ್ನ ವಿರುದ್ಧ ಯಾವುದೇ ವಾರಂಟ್ ಜಾರಿಯಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ ಅವರು.
ಸೋನಾಕ್ಷಿ ಸಿನ್ಹಾ ಮದುವೆ ಗಾಸಿಪ್:
ನಟ ಸಲ್ಮಾನ್ ಖಾನ್ ಅವರ ಮದುವೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಅವರು ಹಲವರ ಜೊತೆ ಡೇಟಿಂಗ್ ಮಾಡಿದ್ದರು. ಆದರೆ ಯಾರೂ ಕೂಡ ಸಲ್ಲು ಜೊತೆ ಮದುವೆ ಆಗಲು ಮುಂದೆ ಬರಲಿಲ್ಲ. ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅವರು ಮದುವೆ ಆಗಿದ್ದಾರೆ ಎಂಬ ಗಾಳಿ ಸುದ್ದಿ ಇತ್ತೀಚೆಗೆ ಹರಡಿತ್ತು. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅವರು ನವ ದಂಪತಿಯ ರೀತಿಯಲ್ಲಿ ಮದುವೆ ಡ್ರೆಸ್ನಲ್ಲಿ ಕಾಣಿಸಿಕೊಂಡಿರುವ ಒಂದು ಫೋಟೋ ವೈರಲ್ ಆಗಿತ್ತು. ಈ ಜೋಡಿಯ ನಡುವೆ ಉತ್ತಮ ಒಡನಾಟ ಇದೆ ಎಂಬುದು ನಿಜ. ಆದರೆ ಮದುವೆ ಆಗಿದ್ದಾರೆ ಎಂಬುದೆಲ್ಲ ಬರೀ ಕಟ್ಟುಕಥೆ. ಅದೊಂದು ಎಡಿಟೆಡ್ ಫೋಟೋ. ಬೇರೆ ಯಾರದ್ದೋ ಮದುವೆ ಫೋಟೋಗೆ ಸೋನಾಕ್ಷಿ ಸಿನ್ಹಾ ಹಾಗೂ ಸಲ್ಮಾನ್ ಖಾನ್ ಅವರ ಮುಖವನ್ನು ಎಡಿಟ್ ಮಾಡಿ ಆ ರೀತಿ ವೈರಲ್ ಮಾಡಲಾಗಿತ್ತು. ಅದನ್ನು ನಿಜ ಎಂದು ನಂಬಿಕೊಂಡವರು ನಂತರ ಸತ್ಯ ಏನೆಂಬುದು ತಿಳಿದು ಪೆಚ್ಚಾಗಿದ್ದರು.
ಇದನ್ನೂ ಓದಿ: ಜಹೀರ್ ಇಕ್ಬಾಲ್ ಜತೆ ಸೋನಾಕ್ಷಿ ಸಿನ್ಹಾ ಡೇಟಿಂಗ್? ವೈರಲ್ ಆಗುತ್ತಿದೆ ಫೋಟೋ
ಗಂಡ-ಹೆಂಡತಿ ವೇಷದಲ್ಲಿ ಸೋನಾಕ್ಷಿ-ಸಲ್ಮಾನ್ ಖಾನ್; ನಕಲಿ ಫೋಟೋ ನೋಡಿ ಯಾಮಾರಿದ ನೆಟ್ಟಿಗರು