ಹುಟ್ಟುಹಬ್ಬಕ್ಕೆ ಜನಮೆಚ್ಚುವ ಘೋಷಣೆ ಮಾಡಿದ ಸೋನು ಸೂದ್
Sonu Sood Birthday: ಸೋನು ಸೂದ್ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯದಿಂದಲೂ ಜನಪ್ರಿಯರು. ಕೋವಿಡ್ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯ ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚೆಗಷ್ಟೆ ಸೋನು ಸೂದ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದಂದು ಮಹತ್ವದ ಘೋಷಣೆಯೊಂದನ್ನು ಅವರು ಮಾಡಿದ್ದಾರೆ.

ಸೋನು ಸೂದ್ (Sonu Sood) ಒಳ್ಳೆಯ ನಟ, ಫಿಟ್ನೆಸ್ ಫ್ರೀಕ್ ಆಗಿರುವ ಜೊತೆಗೆ ಒಳ್ಳೆಯ ಸಮಾಜ ಸೇವಕ ಸಹ. ಕೋವಿಡ್ ಸಮಯದಲ್ಲಿ ಸೋನು ಸೂದ್ ಮಾಡಿದ ಸೇವಾ ಕಾರ್ಯಕ್ಕೆ ದೇಶದ ಉನ್ನತ ನಾಯಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೋವಿಡ್ ಸಮಯದಲ್ಲಿ ಸೋನು ಸೂದ್ ಕಾರ್ಯ ಮೆಚ್ಚಿ ಜನ ಅವರನ್ನು ‘ಮಸೀಹ’ (ಅವತಾರ ಪುರುಷ) ಎಂದು ಕರೆದಿದ್ದರು. ಸೋನು ಸೂದ್ ತಮ್ಮ ಈ ಸಾಮಾಜಿಕ ಕಾರ್ಯವನ್ನು ಕೋವಿಡ್ ಬಳಿಕವೂ ಮುಂದುವರೆಸಿದ್ದಾರೆ. ಜುಲೈ 30 ರಂದು ಸೋನು ಸೂದ್ ಹುಟ್ಟುಹಬ್ಬವಿತ್ತು. ಆ ದಿನದಂದು ಜನಮೆಚ್ಚುವ ಘೋಷಣೆಯೊಂದನ್ನು ಅವರು ಮಾಡಿದ್ದಾರೆ.
ಸೋನು ಸೂದ್, ಬೃಹತ್ ವೃದ್ಧಾಶ್ರಮ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಈ ವಿಷಯ ಹಂಚಿಕೊಂಡಿರುವ ಸೋನು ಸೂದ್, ಕನಿಷ್ಟ 500 ಮಂದಿ ವೃದ್ಧರಿಗೆ ಆಶ್ರಯ ನೀಡುವ ಬೃಹತ್ ವೃದ್ಧಾಶ್ರಮವನ್ನು ಸಕಲ ಸೌಲಭ್ಯಗಳೊಟ್ಟಿಗೆ ನಿರ್ಮಾಣ ಮಾಡಲು ಸೋನು ಸೂದ್ ಮುಂದಾಗಿದ್ದಾರೆ. ಸೋನು ಸೂದ್ ನಿರ್ಮಾಣ ಮಾಡಲಿರುವ ವೃದ್ಧಾಶ್ರಮ, ವೃದ್ಧರಿಗೆ ಕೇವಲ ಸೂರು ಒದಗಿಸುವುದು ಮಾತ್ರವೇ ಅಲ್ಲದೆ, ಅವರ ಆರೋಗ್ಯದ ಕಾಳಜಿ ವಹಿಸುವ ವ್ಯವಸ್ಥೆ, ಅಧ್ಯಾತ್ಮ ಮಂದಿರ, ಪಾರ್ಕು, ಮನೊರಂಜನೆ ವಿಭಾಗ ಎಲ್ಲವನ್ನೂ ಸಹ ಒಳಗೊಂಡಿರಲಿದೆ. ವೃದ್ಧರು ಅಂತಿಮ ದಿನಗಳನ್ನು ನೆಮ್ಮದಿಯಿಂದ, ಸಂತೋಷದಿಂದ ಕಳೆಯಲು ಸಕಲ ವ್ಯವಸ್ಥೆಗಳನ್ನು ವೃದ್ದಾಶ್ರಮದಲ್ಲಿ ಸೋನು ಸೂದ್ ಮಾಡಲಿದ್ದಾರೆ.
ಇದನ್ನೂ ಓದಿ:ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
ಸೋನು ಸೂದ್ ಮಾಡಿರುವ ಈ ವರೆಗೆ ಸಾಮಾಜಿಕ ಕಾರ್ಯಕ್ಕೆ ತೀವ್ರ ಮೆಚ್ಚುಗೆ ದೇಶದಾದ್ಯಂತದಿಂದ ವ್ಯಕ್ತವಾಗಿದೆ. ಇದೀಗ ಸೋನು ಅವರ ಈ ಹೊಸ ಸಾಹಸಕ್ಕೂ ಸಹ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋನು ಸೂದ್, ಈ ವೃದ್ಧಾಶ್ರಮ ನಿರ್ಮಾಣ ಕಾರ್ಯವನ್ನು ತಮ್ಮದೇ ಫೌಂಡೇಶನ್ ಮೂಲಕ ಮಾಡಲಿದ್ದಾರೆ. ಸೋನು ಸೂದ್, ತಮ್ಮ ರಾಜ್ಯದಲ್ಲಿ ಮಾತ್ರವೇ ಅಲ್ಲದೆ, ದೇಶದ ಎಲ್ಲ ರಾಜ್ಯಗಳಲ್ಲಿಯೂ ಜನರಿಗೆ ಸಹಾಯ ಮಾಡಿದ್ದಾರೆ. ಬುಧವಾರ ಸೋನು ಸೂದ್ ಹುಟ್ಟುಹಬ್ಬದಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹ ವಿಶ್ ಮಾಡಿ, ಅವರ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೋನು ಸೂದ್ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಅವರು ನಾಯಕನಾಗಿ ನಟಿಸಿದ ‘ಫತೇಹ್’ ಸಿನಿಮಾ ಇದೇ ವರ್ಷ ತೆರೆಗೆ ಬಂದಿದೆ. ‘ಫತೇಹ್’ ಸಿನಿಮಾವನ್ನು ಅವರೇ ನಿರ್ದೇಶಿಸಿ, ನಿರ್ಮಾಣ ಸಹ ಮಾಡಿದ್ದರು. ಕೋವಿಡ್ಗೆ ಮುಂಚೆ ಸೋನು ಸೂದ್ಗೆ ವಿಲನ್ ಪಾತ್ರಗಳು ಹೆಚ್ಚಾಗಿ ದೊರಕುತ್ತಿದ್ದವು. ಅವರು ಬಹಳ ಬ್ಯುಸಿ ಆಗಿರುತ್ತಿದ್ದರು. ಆದರೆ ಅವರು ಸಮಾಜ ಸೇವಾ ಕಾರ್ಯಕ್ಕೆ ಇಳಿದ ಬಳಿಕ ಅವರಿಗೆ ವಿಲನ್ ಪಾತ್ರಗಳು ಬರುವುದೇ ನಿಂತು ಹೋಗಿವೆ. ಈಗ ಮೊದಲಿನಷ್ಟು ಸಿನಿಮಾಗಳಲ್ಲಿ ಸೋನು ಸೂದ್ ನಟಿಸುತ್ತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




