
ರಣ್ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಭಾರತದ ಈ ಹಿಂದಿನ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಲಿದೆ ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ವಾರಕ್ಕೂ ಹೆಚ್ಚು ಸಮಯವಾಗಿದ್ದು, ಈಗಲೂ ಸಹ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಇತ್ತೀಚೆಗೆ ಕೆಲ ಸಂಘಟನೆಗಳು ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸಿನಿಮಾದ ನಿಷೇಧಕ್ಕೆ ಕರೆ ನೀಡಿದ್ದವು. ಇದೀಗ ಸಿನಿಮಾ ವಿರುದ್ಧ ನೇರವಾಗಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಲಾಗಿದೆ. ಆದರೆ ಅರ್ಜಿಯ ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್, ‘ನ್ಯಾಯಾಲಯದ ಸಮಯ ವ್ಯರ್ಥ ಮಾಡಬೇಡಿ’ ಎಂದಿದೆ.
‘ರಾಮಾಯಣ’ ಸಿನಿಮಾದಲ್ಲಿ ಹಲವು ವಿಷಯಗಳನ್ನು ತಿರುಚಲಾಗಿದ್ದು, ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ನವೆಂಬರ್ 23ಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರಲಿಲ್ಲ. ಈ ಬಗ್ಗೆ ದೂರುದಾರರ ಪರ ವಕೀಲರು ಪ್ರಶ್ನೆ ಮಾಡಿದ್ದು, ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದಿದ್ದರು. ತ್ರಿಸದಸ್ಯ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆದಿದೆ.
‘ಅರ್ಜಿಯ ತ್ವರಿತ ವಿಚಾರಣೆ ಮಾಡಬೇಕು’ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಸಿನಿಮಾ ಈಗಾಗಲೇ ಬಿಡುಗಡೆ ಆಗಿದೆ, ಯಾರಿಗೆ ನೋಡಬೇಕು ಎನಿಸಿತೋ ಅವರೆಲ್ಲ ನೋಡಿದ್ದಾರೆ’ ಎಂದರು. ‘ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ತಿರುಚಲಾಗಿದೆ’ ಎಂಬ ವಾದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, ‘ಅವರಿಗೆ ಕಥೆ ಹೇಗೆ ಅರ್ಥ ಆಗಿದೆಯೋ ಹಾಗೆ ಅವರು ಸಿನಿಮಾ ಮಾಡಿದ್ದಾರೆ. ನಿಮಗೆ ಹೇಗೆ ಅರ್ಥ ಆಗಿದೆಯೋ ಹಾಗೆ ನೀವು ಸಿನಿಮಾ ಮಾಡಿ. ‘ರಾಮಾಯಣ’ ಪೌರಾಣಿಕ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯ ಭಿನ್ನವಾಗಿದ್ದರೆ ಅದರ ಆಧಾರದ ಮೇಲೆ ಬೇರೆ ಸಿನಿಮಾ ಮಾಡಿ, ಸುಮ್ಮನೆ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಬೇಡಿ’ ಎಂದು ಖಾರವಾಗಿ ನುಡಿದಿದ್ದಾರೆ.
ಇದನ್ನೂ ಓದಿ:ರಣ್ಬೀರ್ ಕಪೂರ್ ಧರಿಸಿದ್ದ ಗಡಿಯಾರದ ಬೆಲೆ ಎಷ್ಟು ಲಕ್ಷ ಗೊತ್ತೆ?
ಅರ್ಜಿಯ ತ್ವರಿತ ವಿಚಾರಣೆಗೆ ವಕೀಲರು ಪದೇ ಪದೇ ಆಗ್ರಹಿಸಿದಾಗ ಅದಕ್ಕೂ ನಿರಾಕರಿಸಿದ ನ್ಯಾಯಮೂರ್ತಿಗಳು, ಅರ್ಜಿಯು ನಿಯಮದಂತೆ ಸರತಿಯಲ್ಲಿ ವಿಚಾರಣೆಗೆ ಬರಲಿದೆ ಎಂದಿದ್ದಾರೆ. ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ, ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ‘ರಾಮಾಯಣ’ ಸಿನಿಮಾದಲ್ಲಿ ಪೌರಾಣಿಕ ಕಥೆಯಲ್ಲಿರುವ ಹಲವು ಅಂಶಗಳನ್ನು ತಿರುಚಲಾಗಿದೆ ಎಂದು ಆರೋಪ ಮಾಡಲಾಗಿದೆ.
ಇತ್ತೀಚೆಗೆ ಕೆಲ ಹಿಂದೂ ಸಂಘಟನೆಗಳು ಸಹ ಸಿನಿಮಾದ ವಿರುದ್ಧ ಆಕ್ರೋಶ ಹೊರಹಾಕಿದ್ದವು. ಸಿನಿಮಾದಲ್ಲಿ ಶ್ರೀರಾಮ ಮತ್ತು ಲಕ್ಷ್ಮಣರನ್ನು ಬಲಹೀನರನ್ನಾಗಿ ತೋರಿಸಲಾಗಿದೆ. ರಾವಣನನ್ನು ಮಹಾ ಶಕ್ತಿವಂತನೂ, ಸಾಮಾಜಿಕ ನ್ಯಾಯದ ಪ್ರತಿಪಾದಕನೂ ಎಂಬಂತೆ ತೋರಿಸಲಾಗಿದೆ. ಈ ಸಿನಿಮಾ ಕಮ್ಯೂನಿಸ್ಟ್ ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ ಎಂದು ಸಹ ಕೆಲವರು ಆರೋಪಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ