ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರನ್ನು ಅಭಿಮಾನಿಗಳು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಬಿಐ (CBI) ತಂಡ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಅವರನ್ನು ಯಾರೋ ಕೊಲೆ ಮಾಡಿರಬಹುದು ಎಂಬುದು ಕುಟುಂಬದವರ ಮತ್ತು ಅಭಿಮಾನಿಗಳ ಅನುಮಾನ. ಆ ಅನುಮಾನಕ್ಕೆ ಪುಷ್ಟಿ ನೀಡುವಂತಹ ಘಟನೆ ಇತ್ತೀಚೆಗೆ ನಡೆದಿದೆ. ಸುಶಾಂತ್ ಅವರ ಮೃತದೇಹದ ಮೇಲೆ ಗಾಯದ ಕಲೆಗಳಿದ್ದವು ಎಂದು ಕೂಪರ್ ಆಸ್ಪತ್ರೆಯ ಸಿಬ್ಬಂದಿ ಬಾಯಿ ಬಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ (Shweta Singh Kirti) ಅವರು ಆಗ್ರಹಿಸಿದ್ದಾರೆ.
2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಬಳಿಕ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಆ ವೇಳೆ ಕೆಲಸ ಮಾಡುತ್ತಿದ್ದ ಶವಾಗಾರದ ಸಿಬ್ಬಂದಿ ರೂಪ್ಕುಮಾರ್ ಶಾ ಅವರು ಈಗ ಹೊಸ ವಿಚಾರಗಳನ್ನು ಬಯಲು ಮಾಡಿದ್ದಾರೆ. ಸುಶಾಂತ್ ದೇಹದ ಮೇಲೆ ಗಾಯದ ಗುರುತುಗಳು ಇದ್ದವು ಎಂದು ಅವರು ಹೇಳಿದ್ದಾರೆ. ಇದರಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: Rhea Chakraborty: ಸುಶಾಂತ್ ಸಿಂಗ್ ರಜಪೂತ್ ಕೇಸ್; ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿಗೆ ಹೆಚ್ಚಿತು ಸಂಕಷ್ಟ
‘ಈ ಸಾಕ್ಷಿಯಲ್ಲಿ ಸತ್ಯ ಇರುವುದಾದರೆ ಈ ಬಗ್ಗೆ ಸಿಬಿಐ ಗಮನ ಹರಿಸಬೇಕು ಅಂತ ನಾವು ಒತ್ತಾಯಿಸುತ್ತೇವೆ. ನೀವು ನ್ಯಾಯಸಮ್ಮತವಾದ ತನಿಖೆ ಮಾಡುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ. ಇನ್ನೂ ಪ್ರಕರಣ ಅಂತ್ಯವಾಗಿಲ್ಲ ಎಂದು ನಮಗೆ ನೋವಾಗುತ್ತಿದೆ’ ಎಂದು ಶ್ವೇತಾ ಸಿಂಗ್ ಕೀರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಾತಿಗೆ ಅಭಿಮಾನಿಗಳು ಸಹಮತ ಸೂಚಿಸಿದ್ದಾರೆ.
‘ಬಟ್ಟೆಗಳನ್ನು ತೆಗೆದಾದ ಸುಶಾಂತ್ ದೇಹದ ಮೇಲೆ ಹೊಡೆತದ ಗುರುತುಗಳು ಇದ್ದವು. ಕುತ್ತಿಗೆಯ ಎರಡು ಅಥವಾ ಮೂರು ಕಡೆ ಗಾಯದ ಕಲೆ ಇತ್ತು. ದೇಹದ ಮೇಲೆ ತೀವ್ರವಾದ ಗಾಯದ ಗುರುತುಗಳು ಇದ್ದವು. ವಿಡಿಯೋ ಚಿತ್ರೀಕರಣ ಆಗಬೇಕಿತ್ತು. ಆದು ಆಯಿತೋ ಇಲ್ಲವೋ ಗೊತ್ತಿಲ್ಲ. ಕೇವಲ ಫೋಟೋಗಳಲ್ಲಿ ಕೆಲಸ ಮಾಡುವಂತೆ ಸೀನಿಯರ್ಗಳಿಗೆ ತಿಳಿಸಲಾಯ್ತು. ನಾವು ಹಾಗೇ ಕೆಲಸ ಮಾಡಿದೆವು’ ಎಂದು ರೂಪ್ಕುಮಾರ್ ಶಾ ಹೇಳಿದ್ದಾರೆ.
ಆತ್ಮಹತ್ಯೆಯಿಂದ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಅನಿಸುತ್ತಿದೆಯಾದರೂ ಅಂತಿಮ ತನಿಖಾ ವರದಿ ಏನು ಹೇಳಲಿದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಸಿಬಿಐ ನೀಡಲಿರುವ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.