ಹಸಿ-ಬಿಸಿ ದೃಶ್ಯಗಳ ಸಿನಿಮಾನಲ್ಲಿ ತಮನ್ನಾ ನಾಯಕಿ, ಅಭಿಮಾನಿಗಳಿಗೆ ಶಾಕ್
Tamannah Bhatia: ತಮನ್ನಾ ಭಾಟಿಯಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳಾದವು. ಈಗಲೂ ಸಹ ನಾಯಕಿಯಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಗ್ಲಾಮರಸ್ ಆಗಿ ತೆರೆ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಂತೂ ಒಂದು ಹೆಜ್ಜೆ ಮುಂದೆ ಹೋಗಿ ಎರೋಟಿಕ್ ಹಾರರ್ ಸಿನಿಮಾನಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ತಮನ್ನಾ.

ನಟಿ ತಮನ್ನಾ ಭಾಟಿಯಾ ಮಿಲ್ಕಿ ಬ್ಯೂಟಿ ಎಂದು ಹೆಸರಾಗಿರುವವರು. ಚಿತ್ರರಂಗಕ್ಕೆ ಕಾಲಿರಿಸಿ ಬರೋಬ್ಬರಿ 20 ವರ್ಷಗಳಾಗಿವೆ. ಆದರೆ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ ನಟಿ ತಮನ್ನಾ. ಆದರೆ ಇತ್ತೀಚೆಗಿನ ಕೆಲ ವರ್ಷಗಳಿಂದ ತಮನ್ನಾ ಭಾಟಿಯಾ, ಐಟಂ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆಗಿಂತಲೂ ಗ್ಲಾಮರ್ ಅನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಐಟಂ ಹಾಡಿನ ವರೆಗೂ ಸರಿಯಿತ್ತೇನೋ ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಹಸಿ-ಬಿಸಿ ದೃಶ್ಯಗಳಿಂದಲೇ ಜನಪ್ರಿಯತೆ ಗಳಿಸಿರುವ ಸಿನಿಮಾ ಸರಣಿಯ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
2011 ರಲ್ಲಿ ಬಿಡುಗಡೆ ಆಗಿದ್ದ ‘ರಾಗಿಣಿ ಎಂಎಂಎಸ್’ ಸಿನಿಮಾ, ಲಘು ಲೈಂಗಿಕ ದೃಶ್ಯಗಳನ್ನು ಅಥವಾ ಶೃಂಗಾರ ದೃಶ್ಯಗಳನ್ನು ಒಳಗೊಂಡ ಹಾರರ್ ಥ್ರಿಲ್ಲರ್ ಸಿನಿಮಾ ಆಗಿತ್ತು. ಆ ಸಿನಿಮಾನಲ್ಲಿ ಈಗ ಸ್ಟಾರ್ ನಟರಾಗಿರುವ ರಾಜ್ಕುಮಾರ್ ರಾವ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಯುವತಿಯೊಬ್ಬಾಕೆಯ ಖಾಸಗಿ ಸಮಯದ ವಿಡಿಯೋ ಮಾಡಿ ಮಾರಾಟ ಮಾಡುವುದು ಆ ಯುವತಿ ಆತ್ಮಹತ್ಯೆಗೆ ಶರಣಾಗಿ ಆಕೆಯ ಆತ್ಮ ತಪ್ಪಿತಸ್ಥರನ್ನು ಕೊಲ್ಲುವ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು.
ಅದಾದ ಬಳಿಕ 2014ರಲ್ಲಿ ‘ರಾಗಿಣಿ ಎಂಎಂಎಸ್ 2’ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾನಲ್ಲಿ ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನಿ ನಟಿಸಿದ್ದರು. ಆ ಸಿನಿಮಾಕ್ಕೂ ಎ ಪ್ರಮಾಣ ಪತ್ರ ಧಕ್ಕಿತ್ತು. ಆ ಸಿನಿಮಾನಲ್ಲಿಯೂ ಸಹ ಹಲವಾರು ಶೃಂಗಾರದ ದೃಶ್ಯಗಳು ಇದ್ದವು. ಆ ಸಿನಿಮಾ ಸಹ ಒಳಗೊಂಡಿದ್ದ ಎರೋಟಿಕ್ ದೃಶ್ಯಗಳಿಂದಲೇ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಗಳಿಸಿತು.
ಇದನ್ನೂ ಓದಿ:ತೆಲ್ಗಿ 93 ಲಕ್ಷ ರೂಪಾಯಿ ಹಣ ಚೆಲ್ಲಿದ್ದು ತಮನ್ನಾ ಭಾಟಿಯಾ ಮೇಲಾ?
ಇದೀಗ ‘ರಾಗಿಣಿ ಎಂಎಂಎಸ್ 3’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ನಾಯಕಿಯಾಗಿ ತಮನ್ನಾ ನಟಿಸುತ್ತಿದ್ದಾರೆ. ಎರೋಟಿಕ್ ಹಾರರ್ ಸಿನಿಮಾನಲ್ಲಿ ತಮನ್ನಾ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ತಮನ್ನಾ ಭಾಟಿಯಾ, ಈ ನಿರ್ಣಯ ತೆಗೆದುಕೊಂಡಿದ್ದರ ಬಗ್ಗೆ ನೆಟ್ಟಿಗರು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ಏಕ್ತಾ ಕಪೂರ್ ನಿರ್ಮಾಣ ಮಾಡಲಿದ್ದಾರೆ.
ತಮನ್ನಾ ಭಾಟಿಯಾ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎಲ್ಲವೂ ಹಿಂದಿ ಸಿನಿಮಾಗಳೇ ಆಗಿವೆ. ‘ರೋಮಿಯೋ’ ಹೆಸರಿನ ಸಿನಿಮಾನಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ರೇಂಜರ್’ ಹೆಸರಿನ ಆಕ್ಷನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ರೋಹಿತ್ ಶೆಟ್ಟಿಯ ಇನ್ನೂ ಹೆಸರಿಡದ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಅದಾದ ಬಳಿಕ ‘ವಿವಾನ್’ ಹೆಸರಿನ ಹಾರರ್ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




