ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಿಲೀಸ್ ಆಗ್ತಿದೆ ‘ದಿ ಬೆಂಗಾಲ್ ಫೈಲ್ಸ್’

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿವೇಕ್ ಅಗ್ನಿಹೋತ್ರಿಯವರ 'ದಿ ಬೆಂಗಾಲ್ ಫೈಲ್ಸ್' ಸಿನಿಮಾ ಪಶ್ಚಿಮ ಬಂಗಾಳದಲ್ಲಿ ತೆರೆಕಾಣಲಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಅವಧಿಯಲ್ಲಿ ನಿರ್ಬಂಧಕ್ಕೊಳಗಾಗಿದ್ದ ಈ ಚಿತ್ರ, 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಗಳಿಸಿದ ನಂತರ ಮೇ 15ರಂದು ಬಿಡುಗಡೆಯಾಗಲಿದೆ. ಬಂಗಾಳದ ಕರಾಳ ಇತಿಹಾಸವನ್ನು ಆಧರಿಸಿದ ಈ ಚಿತ್ರದ ಬಿಡುಗಡೆ ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಿಲೀಸ್ ಆಗ್ತಿದೆ ‘ದಿ ಬೆಂಗಾಲ್ ಫೈಲ್ಸ್’
ಬೆಂಗಾಲ್ ಫೈಲ್ಸ್

Updated on: May 08, 2026 | 9:00 AM

ವಿವೇಕ್ ಅಗ್ನಿಹೋತ್ರಿ () ನಿರ್ದೇಶನದ’ದಿ ಬೆಂಗಾಲ್ ಫೈಲ್ಸ್’ ಸಿನಿಮಾ (The Bengal Files) 2025ರಲ್ಲಿ ಭಾರತದಲ್ಲಿ ರಿಲೀಸ್ ಆಯಿತು. ಆದರೆ, ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಈ ಚಿತ್ರವನ್ನು ಪಶ್ಚಿಮ ಬಂಗಾಳದಲ್ಲಿ ತೆರೆಗೆ ತರಲು ಸಾಧ್ಯ ಆಗಿರಲಿಲ್ಲ. ಕೊನೆಗೂ ಪಶ್ಚಿಮ ಬಂಗಾಳದ ಚಿತ್ರಮಂದಿರಗಳಲ್ಲಿ ಮೇ 15ರಂದು ತೆರೆಕಾಣಲಿದೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅಧಿಕೃತವಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

1. 2025ರಲ್ಲಿ ರಿಲೀಸ್ ಆಗಿದ್ದ ‘ದಿ ಬೆಂಗಾಲ್ ಫೈಲ್ಸ್’

2. ಪಶ್ಚಿಮ ಬಂಗಾಳದಲ್ಲಿ ವ್ಯಕ್ತವಾಗಿತ್ತು ವಿರೋಧ

3. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಿನಿಮಾ ರಿಲೀಸ್ 

‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಬೆಂಗಾಲ್​ ಫೈಲ್ಸ್’ ನಿರ್ದೇಶನ ಮಾಡಿದ್ದರು. ಈ ಚಿತ್ರ 2025ರಲ್ಲೇ ದೇಶಾದ್ಯಂತ ಬಿಡುಗಡೆಯಾಗಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಪ್ರದರ್ಶನಕ್ಕೆ ತೀವ್ರ ಅಡೆತಡೆಗಳು ಎದುರಾಗಿದ್ದವು.

ಮಮತಾ ಬ್ಯಾನರ್ಜಿ ನೇತೃತ್ವದ ಅಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರ ಚಿತ್ರದ ಪ್ರದರ್ಶನಕ್ಕೆ ಪರೋಕ್ಷವಾಗಿ ತಡೆ ಒಡ್ಡಿತ್ತು. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಧ್ವನಿ ಎತ್ತಿದ್ದರು. ಚಿತ್ರಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

‘ದಿ ಬೆಂಗಾಲ್ ಫೈಲ್ಸ್’ ಚಿತ್ರವು ಬಂಗಾಳದ ಇತಿಹಾಸದ ಕರಾಳ ಘಟನೆಗಳಾದ ‘ಡೈರೆಕ್ಟ್ ಆಕ್ಷನ್ ಡೇ’ (ನೇರ ಕ್ರಮ ದಿನ) ಮತ್ತು ನೋಖಾಲಿ ದಂಗೆಗಳ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಈ ಚಿತ್ರವು ಪ್ರಚೋದನಾತ್ಮಕವಾಗಿದೆ ಎಂಬ ಟೀಕೆಗಳು ಒಂದು ಕಡೆಯಾದರೆ, ಇದು ಮರೆತುಹೋದ ಇತಿಹಾಸವನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಎಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಪ್ರಧಾನಿ ಮೋದಿಯವರ ತೀವ್ರ ಪ್ರಚಾರದ ಫಲವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ರಾಜಕೀಯ ಬದಲಾವಣೆಯು ಚಿತ್ರದ ಬಿಡುಗಡೆಗೆ ಹಾದಿ ಸುಗಮಗೊಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಗ್ನಿಹೋತ್ರಿ, ‘ಸತ್ಯವನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಬೆಂಗಾಲಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆ: ಸಿನಿಮಾದ ಕತೆ ಏನು?

ಈಗಾಗಲೇ ಈ ಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಬಂಗಾಳದ ನೆಲದಲ್ಲೇ ಬಿಡುಗಡೆಯಾಗುತ್ತಿರುವುದು ಸಿನಿಮಾ ಪ್ರೇಮಿಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:56 am, Fri, 8 May 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us