ಭಾರತದ ಸಿನಿಮಾರಂಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಈ ಹಿಂದೆ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ್ದ ಅನೇಕ ಚಿತ್ರಗಳನ್ನು ಹಿಂದಿಕ್ಕಿ ಈ ಸಿನಿಮಾ ಸೌಂಡು ಮಾಡುತ್ತಿದೆ. ಬಿಡುಗಡೆಯಾಗಿ 25 ದಿನ ಕಳೆದಿದ್ದರೂ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಲೇ ಇದೆ. ಕಲೆಕ್ಷನ್ (The Kashmir Files Box Office Collection) ವಿಚಾರದಲ್ಲಿ ಹಲವು ಮೈಲಿಗಲ್ಲುಗಳನ್ನು ಈ ಸಿನಿಮಾ ಸ್ಥಾಪಿಸಿದೆ. ಈ ಹಿಂದೆ ವಿಕ್ಕಿ ಕೌಶಲ್ ನಟಿಸಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ (Uri The Surgical Strike) ಸಿನಿಮಾ ಮಾಡಿದ್ದ ಲೈಫ್ಟೈಮ್ ಗಳಿಕೆಯನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕೇವಲ 24ನೇ ದಿನದಲ್ಲಿ ಮಾಡಿದೆ. ಇದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮತ್ತು ಅವರ ಇಡೀ ತಂಡಕ್ಕೆ ಖುಷಿ ನೀಡಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಮೂಡಿಬಂದ ಈ ಸಿನಿಮಾವನ್ನು ದೇಶಾದ್ಯಂತ ಜನರು ಮುಗಿಬಿದ್ದು ನೋಡಿದ್ದಾರೆ. ಈಗಲೂ ಕೂಡ ಈ ಚಿತ್ರ ಕೋಟಿಗಟ್ಟಲೆ ಹಣ ಗಳಿಸುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳು ತೆರೆಕಂಡರೂ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಹವಾ ಕಮ್ಮಿ ಆಗಿಲ್ಲ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿ ದೇಶಭಕ್ತಿಯ ಕಥಾಹಂದರ ಇತ್ತು. ಆ ಚಿತ್ರಕ್ಕೆ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದರು. ವಿಕ್ಕಿ ಕೌಶಲ್, ಪರೇಷ್ ರಾವಲ್, ಯಾಮಿ ಗೌತಮ್ ಮುಂತಾದವರು ಈ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದರು. ಹಲವು ತಿಂಗಳ ಕಾಲ ಆ ಚಿತ್ರ ಪ್ರದರ್ಶನ ಕಂಡಿತ್ತು. ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಲೈಫ್ಟೈಮ್ ಕಲೆಕ್ಷನ್ 245 ಕೋಟಿ ರೂಪಾಯಿಗಳು. ಈಗ ಆ ಸಿನಿಮಾಗಿಂತಲೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಜಯಭೇರಿ ಬಾರಿಸಿದೆ.
ಏ.3ಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬರೋಬ್ಬರಿ 245 ಕೋಟಿ ರೂಪಾಯಿ ಗಳಿಸುವ ಮೂಲಕ ‘ಉರಿ’ ಚಿತ್ರದ ಸರಿಸಮವಾಗಿ ನಿಂತಿತು. ಏ.4ರಂದು ಕೂಡ ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಇನ್ನೂ ಅನೇಕ ದಿನಗಳ ಕಾಲ ಪ್ರದರ್ಶನ ಆಗಲಿದೆ. ಆ ಮೂಲಕ ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಿ ‘ಉರಿ’ ಚಿತ್ರವನ್ನೂ ಮೀರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಮುನ್ನುಗ್ಗುತ್ತಿದೆ.
ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ವಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ಪುನೀತ್ ಇಸ್ಸಾರ್ ಮುಂತಾದವರು ನಟಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂತಾದ ರಾಜಕಾರಣಿಗಳು ಮೆಚ್ಚುಗೆ ಮಾತುಗಳನ್ನು ಹೇಳಿದ ಬಳಿಕ ಜನರಿಗೆ ಈ ಚಿತ್ರದ ಬಗ್ಗೆ ಕೌತುಕ ಹೆಚ್ಚಿತು. ಅನೇಕ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಯಿತು.
ಕೆಲವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವಿರೋಧಿಸಿದ್ದಾರೆ. ಆದರೂ ಇದರ ಗಲ್ಲಾಪೆಟ್ಟಿಗೆ ಗಳಿಕೆಗೆ ತೊಂದರೆ ಆಗಿಲ್ಲ. ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಲಾಭ ಮಾಡಿದೆ. ಆ ಮೂಲಕ ಹಿಂದಿ ಸಿನಿಮಾದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಈ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜಾರಿಯಲ್ಲಿದೆ. ಅತ್ತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಹೊಸ ಸಿನಿಮಾ ಬಗ್ಗೆ ಗಮನ ಹರಿಸಿದ್ದಾರೆ. ಆ ಚಿತ್ರಕ್ಕೆ ‘ದಿ ದಿಲ್ಲಿ ಫೈಲ್ಸ್’ ಎಂದು ಶೀರ್ಷಿಕೆ ಇಡಲಾಗಿದೆ.
ಇದನ್ನೂ ಓದಿ:
‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಪಕರ ಹೊಸ ಚಿತ್ರ ಅನೌನ್ಸ್; ಮತ್ತೆ ನೈಜ ಘಟನೆ ಆಧಾರಿತ ಸಿನಿಮಾಗೆ ಬಂಡವಾಳ