‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಪಕರ ಹೊಸ ಚಿತ್ರ ಅನೌನ್ಸ್; ಮತ್ತೆ ನೈಜ ಘಟನೆ ಆಧಾರಿತ ಸಿನಿಮಾಗೆ ಬಂಡವಾಳ
Tiger Nageswara Rao: ನಟ ರವಿ ತೇಜ ಪಾಲಿಗೆ ‘ಟೈಗರ್ ನಾಗೇಶ್ವರ ರಾವ್’ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಆ ಕಾರಣದಿಂದಲೂ ಈ ಚಿತ್ರ ನಿರೀಕ್ಷೆ ಸೃಷ್ಟಿ ಮಾಡಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಮೂಡಿಬಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಎಷ್ಟು ಸಂಚಲನ ಮೂಡಿಸಿತು ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಈ ಸಿನಿಮಾಗೆ ಬಂಡವಾಳ ಹೂಡಿದವರು ನಿರ್ಮಾಪಕ ಅಭಿಷೇಕ್ ಅಗರ್ವಾಲ್. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಅವರಿಗೆ ಭರ್ಜರಿ ಲಾಭ ಆಗಿದೆ. ಕಡಿಮೆ ಬಜೆಟ್ನಲ್ಲಿ ಮೂಡಿಬಂದ ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು. ಈಗ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ‘ಟೈಗರ್ ನಾಗೇಶ್ವರ ರಾವ್’ (Tiger Nageswara Rao) ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ ಈ ಬಾರಿ ಕೂಡ ಅಭಿಷೇಕ್ ಅಗರ್ವಾಲ್ ಅವರು ನೈಜ ಘಟನೆ ಆಧಾರಿತ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಕಾರಣದಿಂದ ಮತ್ತೆ ಎಲ್ಲರಲ್ಲೂ ಕೌತುಕ ಮೂಡಿವಂತಾಗಿದೆ. ಬಹುಭಾಷೆಯಲ್ಲಿ ‘ಟೈಗರ್ ನಾಗೇಶ್ವರ ರಾವ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ಟಾಲಿವುಡ್ನ ಖ್ಯಾತ ನಟ ‘ಮಾಸ್ ಮಹಾರಾಜ’ ರವಿ ತೇಜ (Ravi Teja) ಅವರು ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಂಶಿ ಅವರು ನಿರ್ದೇಶನ ಮಾಡಲಿದ್ದಾರೆ.
ಸ್ಟೂವರ್ಟ್ಪುರಂನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ‘ಟೈಗರ್ ನಾಗೇಶ್ವರ ರಾವ್’ ನಿರ್ಮಾಣ ಆಗಲಿದೆ. ಇಂದು (ಮಾ.2) ಯುಗಾದಿ ಹಬ್ಬದ ಪ್ರಯುಕ್ತ ಪ್ರೀ-ಲುಕ್ ಪೋಸ್ಟರ್ ರಿಲೀಸ್ ಆಗಲಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನಿರ್ಮಾಣ ಮಾಡಿದ ಅಭಿಷೇಕ್ ಅಗರ್ವಾಲ್ ಅವರ ‘ಅಭಿಷೇಕ್ ಅಗರ್ವಾಲ್ ಆರ್ಟ್ಸ್’ ಬ್ಯಾನರ್ ಮೂಲಕ ‘ಟೈಗರ್ ನಾಗೇಶ್ವರ ರಾವ್’ ಚಿತ್ರ ಸಿದ್ಧವಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ನಟ ರವಿ ತೇಜ ಪಾಲಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಆ ಕಾರಣದಿಂದಲೂ ‘ಟೈಗರ್ ನಾಗೇಶ್ವರ ರಾವ್’ ಚಿತ್ರ ನಿರೀಕ್ಷೆ ಸೃಷ್ಟಿ ಮಾಡಿದೆ. ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಅವರು ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಾಯಕಿಯರಾಗಿ ನೂಪುರ್ ಸನೋನ್, ಗಾಯತ್ರಿ ಭಾರದ್ವಜ್ ಅವರು ನಟಿಸಲಿದ್ದಾರೆ. ಮತ್ತೋರ್ವ ನಟಿ ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ರೆಟ್ರೋ ಶೈಲಿಯಲ್ಲಿ ‘ಟೈಗರ್ ನಾಗೇಶ್ವರ ರಾವ್’ ಸಿನಿಮಾ ಮೂಡಿಬರಲಿದೆ. ಅದಕ್ಕಾಗಿ ನುರಿತ ತಂತ್ರಜ್ಞರ ತಂಡ ತೆರೆಹಿಂದೆ ಕೆಲಸ ಮಾಡುತ್ತಿದೆ. ಆರ್. ಮ್ಯಾಥಿ ಐಎಸ್ಸಿ ಅವರು ಛಾಯಾಗ್ರಹಣ, ಜಿವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ಶ್ರೀಕಾಂತ್ ವಿಸ್ಸಾ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಮಯಾಂಕ್ ಸಿಂಘಾನಿಯಾ ಅವರು ಸಹ-ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ‘ಟೈಗರ್ ನಾಗೇಶ್ವರ ರಾವ್’ ತಯಾರಾಗಲಿದೆ. ಈಗ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಹೆಚ್ಚುತ್ತಿದೆ. ಇಂಥ ಸಂದರ್ಭಕ್ಕೆ ಸರಿಯಾಗಿ ರವಿ ತೇಜ ಅವರು ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ‘ಟೈಗರ್ ನಾಗೇಶ್ವರ ರಾವ್’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ ಎಂಬುದು ಎಲ್ಲರ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.
ಇದನ್ನೂ ಓದಿ:
ಲಾಭ ಮಾಡುವಲ್ಲಿ ‘ಉರಿ’ ಸಿನಿಮಾವನ್ನೂ ಮೀರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ; ಇಲ್ಲಿದೆ ಲೆಕ್ಕಾಚಾರ